ಬೆಳಗಾವಿ,ಅ. 04 (DaijiworldNews/HR): ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಕುರಿತು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಪಕ್ಷದ ನಾಯಕತ್ವ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ. ಬಿಜೆಪಿಯಲ್ಲಿ ಹುಟ್ಟಿರುವ ಬಿರುಕುಗಳನ್ನು ತಪ್ಪಿಸಲು ಪಕ್ಷದ ನಾಯಕತ್ವವು ಈ ಬಾರಿ ಕೆಲ ನಾಯಕರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇನ್ನು ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದು, ಸಿ ಪಿ ಯೋಗೇಶ್ವರನನ್ನು ಉಪಮುಖ್ಯಮಂತ್ರಿಯನ್ನಾಗಿಸಲು ಎಚ್ ವಿಶ್ವನಾಥ್ ಹಾಗೂ ಆರ್ ಶಂಕರ್ ಜೊತೆಗೆ ಕೆಲ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳ್ಳುವಂತೆ ಮಾಡಲು ಲಾಬಿ ನಡೆದಿದೆ ಎಂದು ಹೇಳಲಾಗುತ್ತಿದೆ.