ನವದೆಹಲಿ, ಅ. 04(DaijiworldNews/PY): 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಅಂಚೆ ಮತಪತ್ರವನ್ನು ಹೆಚ್ಚು ಅನುಕೂಲಕರವಾಗಿಸುವ ಕಾರ್ಯವಿಧಾನವನ್ನು ಮಾಡಲು ಪ್ರಯತ್ನಸುತ್ತಿರುವ ಚುನಾವಣಾ ಆಯೋಗ ಹೊಸ ಸೂಚನೆಗಳನ್ನು ತಂದಿದೆ.
ಅಂಚೆ ಮತಪತ್ರವನ್ನು ಆಯ್ಕೆ ಮಾಡುವ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮತಗಟ್ಟೆಯ ಅಧಿಕಾರಿಗಳು 12-ಡಿ ಅರ್ಜಿ ನಮೂನೆಯನ್ನು ಅವರ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ.
ಚುನಾವಣಾ ಅಧಿಸೂಚನೆ ಹೊರಡಿಸಿದ ಐದು ದಿನಗಳ ಒಳಗಾಗಿ ಭರ್ತಿ ಮಾಡಿದ 12-ಡಿ ಅರ್ಜಿ ನಮೂನೆಯನ್ನು ಸಂಗ್ರಹಿಸಿ ಅದನ್ನು ಹಿಂದಿರುಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ತಿಳಿಸಿದೆ.
ಈ ನೂತನ ಸೂಚನೆಯು ಎಲ್ಲಾ ಚುನಾವಣೆಗಳಿಗೆ ಹಾಗೂ ಉಪಚುನಾವಣೆಗಳಿಗೆ ಅನ್ವಯವಾಗುತ್ತದೆ. ಕಳೆದ ವಾರ ಘೋಷಣೆಯಾದ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಚುನಾವಣೆಗೆ ಈ ಸೂಚನೆ ಜಾರಿಯಾಗುತ್ತದೆ ಎಂದು ಹೇಳಿದೆ.
ಈ ಚುನಾವಣಾ ತಂಡಗಳು ನಿಗದಿಯಾದ ದಿನದಂದು ಅಂಚೆ ಮತಪತ್ರವನ್ನು ತಲುಪಿಸುತ್ತವೆ. ಬಳಿಕ ಅದನ್ನು ಚುನಾವಣಾಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಇನ್ನು ನೌಕರಿಯಲ್ಲಿರುವವರಿಗೆ ನೀಡುವ ಅಂಚೆ ಮತಪತ್ರಕ್ಕೆ ವ್ಯತ್ಯಾಸಗಳಿವೆ. ಈ ಸೌಲಭ್ಯವನ್ನು ಬಳಸಲು ಇಚ್ಛಿಸುವವರು ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಂತರ ಅಧಿಕಾರಿಗಳು ಮತಪತ್ರವನ್ನು ತಲುಪಿಸುತ್ತಾರೆ. ಅಲ್ಲದೇ, ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ವಿಡಿಯೋ ಚಿತ್ರಿಕರಣ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.