ಬೆಂಗಳೂರು, ಅ. 05(DaijiworldNews/PY): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಕೆಶಿ ಅವರ ಸದಾಶಿವ ನಗರದ ಮನೆ ಸೇರಿದಂತೆ ಕನಕಪುರದಲ್ಲಿ ಕೂಡಾ ಏಕಕಾಲದಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಈ ನಡುವೆ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರ ಮನೆಗೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಬಿಐನ ಬೆಂಗಳೂರು ಘಟಕದ ಪೊಲೀಸರು ಇಂದು ಬೆಳಿಗ್ಗೆ ಆರು ಗಂಟೆಗೆ ದಾಳಿ ನಡೆಸಿದ್ದು, ಡಿ.ಕೆ ಸಹೊದರರಿಗೆ ಸೇರಿದ ಹಲವು ಕಡೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯದಿಂದ ಸರ್ಚ್ ವಾರಂಟ್ ನೀಡಿದ ಮೇಲೆ ಸಿಬಿಐ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಈ ಹಿಂದೆಯೂ ಕೂಡಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಬಳಿಕ ಡಿಕೆಶಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಮೇರೆಗೆ ಹೊರಬಂದಿದ್ದರು. ಇದೀಗ ಸಿಬಿಐ ದಾಳಿ ನಡೆಸಿದ್ದು ಟ್ರಬಲ್ ಶೂಟರ್ಗೆ ಇನ್ನೊಂದು ಕಂಟಕ ಎದುರಾಗಿದೆ.