ಚಿಕ್ಕಬಳ್ಳಾಪುರ, ಅ. 05(DaijiworldNews/PY): ವಿಶ್ವವಿಖ್ಯಾತ ನಂದಿಗಿರಿಧಾಮ ಇಂದಿನಿಂದ ಬೆಳಿಗ್ಗ 6 ಗಂಟೆಯಿಂದಲೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಕೊರೊನಾ ಅನ್ಲಾಕ್ ಬಳಿಕ ಬೆಳಗ್ಗೆ 8 ಗಂಟೆಯ ನಂತರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಈ ವೇಳೆ ಅಧಿಕ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಸಮಯ ಬದಲಾವಣೆ ಮಾಡಲಾಗಿದೆ. ಹಾಗಾಗಿ ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್, ನಂದಿಗಿರಿಧಾಮ ದಲ್ಲಿ ನಾಳೆಯಿಂದ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ಸಾರ್ವಜನಿಕರು ಕೋರೋನ ತಡೆಗಟ್ಟುವ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಮನವಿ ಎಂದು ಹೇಳಿದ್ದಾರೆ.
ಭಾನುವಾರ ವೀಕೆಂಡ್ ಕಾರಣ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮುಂಜಾನೆಯ ವೇಳೆ ಸೂರ್ಯೋದಯದ ಸವಿ ಸವಿಯೋಕೆ ಬಂದ ಪ್ರವಾಸಿಗರನ್ನು ಚೆಕ್ ಪೋಸ್ಟ್ ಬಳಿ ತಡೆಯಲಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.