ಮೀರತ್, ಅ. 05 (DaijiworldNews/MB) : ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಬಗ್ಗೆಗಿನ ವಿಚಾರಗಳಿಗೆ ಮೀಸಲಾಗಿರುವ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ಅಖಿಲ ಭಾರತೀಯ ಹಿಂದೂ ಮಹಾಸಭಾ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿಂದೂ ಮಹಾಸಭಾ ವಕ್ತಾರ ಅಭಿಷೇಕ್ ಅಗರ್ವಾಲ್, "ಯುವ ಪೀಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯವಾಗಿದೆ. ಹಾಗಾಗಿ ನಾವು ಯುವ ಜನರನ್ನು ಸೆಳೆಯಲು ನಾಥುರಾಮ್ ಗೋಡ್ಸೆ ಅವರ ಬಗ್ಗೆಗಿನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವ ತೀರ್ಮಾನ ಮಾಡಿದ್ದೇವೆ. ಗಾಂಧಿಯವರ ಹತ್ಯೆಯ ಹಿಂದಿನ ಕಾರಣಗಳ ಬಗ್ಗೆ ಚಾನೆಲ್ ಮೂಲಕ ಜನರಿಗೆ ತಿಳಿಸಲಾಗುತ್ತದೆ. ಹಾಗೆಯೇ ಗೋಡ್ಸೆ ಮಾಡಿದ ಒಳ್ಳೆಯ ಕೆಲಸದ ಬಗ್ಗೆಯೂ ತಿಳಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಮಹಾಸಭಾ ಸೇರಿದಂತೆ ಹಲವಾರು ಸಂಘಟನೆಗಳು ಗಾಂಧೀಜಿಯನ್ನು ಹತ್ಯೆಗೈದ ಗೋಡ್ಸೆಯನ್ನು ತಮ್ಮ ನಾಯಕ ಎಂದು ಪ್ರಶಂಸಿಸಿಕೊಂಡು ಬರುತ್ತಿದ್ದು ದಶಕಗಳಿಂದ ಗೋಡ್ಸೆಯನ್ನು ವೈಭವೀಕರಿಸಲು ಪ್ರಯತ್ನಿಸುತ್ತಿವೆ.
ಏತನ್ಮಧ್ಯೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಆರಾಧನಾ ಮಿಶ್ರಾ ಅವರು, "ಗಾಂಧಿಯವರ ಸಿದ್ಧಾಂತವನ್ನು ಕೆಡವಿ ಅವರ ಬಗ್ಗೆ ಅಪಪ್ರಚಾರ ಮಾಡಲು ಮತ್ತು ಗೋಡ್ಸೆಯನ್ನು ವೈಭವೀಕರಿಸಲು ಕೆಲವು ಹಿಂದೂ ಸಂಘಟನೆಗಳು ಮಾಡಿದ ಮತ್ತೊಂದು ಪ್ರಯತ್ನ ಇದು" ಎಂದು ಹೇಳಿದ್ದಾರೆ.
"ಗಾಂಧಿಯವರ ಸಿದ್ಧಾಂತವು ಭಾರತದ ಜನರ ಡಿಎನ್ಎಯಲ್ಲೇ ತುಂಬಿದೆ. ಗೋಡ್ಸೆ ಅವರ ಸಿದ್ಧಾಂತವನ್ನು ವೈಭವೀಕರಿಸುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಆಡಳಿತ ಪಕ್ಷಗಳು ಇಂತಹವುಗಳನ್ನು ನಿಯಂತ್ರಿಸಬೇಕು" ಎಂದು ಹೇಳಿದ್ದಾರೆ.