ಬೆಂಗಳೂರು,ಅ.5 (DaijiworldNews/HR): 2018ರ ಚುನಾವಣೆಯಲ್ಲಿ 'ಮಹಾನ್ ನಾಯಕರ' 'ಅಪ್ಪನಾಣೆ' 'ತಿಪ್ಪರಲಾಗ'ದ ಸವಾಲುಗಳನ್ನು ಜನ ಸೋಲಿಸಿದ್ದಾರೆ. ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು 'ಅಪ್ಪನಾಣೆ'ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಈ ಉಪ ಚುನಾವವಣೆಯಲ್ಲೂ ಅವರಿಗೆ ತಕ್ಕ ಉತ್ತರ ಸಿಗಲಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ ಎಂಬ ಹೇಳಿಕೆಗೆ ಹೆಚ್ ಡಿಕೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ನಿಂದ ಪ್ರವರ್ದಮಾನಕ್ಕೆ ಬಂದಿದ್ದ, ಜೆಡಿಎಸ್ ನಿಂದಲೇ ಡಿಸಿಎಂ ಆದ ನಾಯಕರೊಬ್ಬರು, ಸಭೆಯೊಂದರಲ್ಲಿ ಜೆಡಿಎಸ್ ಮುಖಂಡರನ್ನು ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಜೆಡಿಎಸ್ ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್ ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ? ಎಂಬುದಾಗಿ ಪ್ರಶ್ನಿಸಿದ್ದಾರೆ.
ಇನ್ನು ಭಾರತದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಪರಿಸ್ಥಿತಿಯಲ್ಲಿದೆ, ಯಾವ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ? ಎಲ್ಲೆಲ್ಲಿ ಯಾರು ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲಿಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಜೆಡಿಎಸ್ ಉಪ್ಪು ತಿಂದ ಆ ಮಹಾನ್ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡುವರೇ? ಎಂದಿದ್ದಾರೆ
ಮಿತ್ರಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕಾರವಾಗಿರುವ, ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್ ತನ್ನ ಅಹಂಕಾರದ ಪ್ರವೃತ್ತಿ ಮುಂದುವರಿಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುವುದರಲ್ಲಿ ಅನುಮಾನಗಳಿಲ್ಲ ಎಂದು ಹೇಳಿದ್ದಾರೆ.