ಬೆಂಗಳೂರು, ಅ. 05 (DaijiworldNews/MB) : ''ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿಬಿಐ ದಾಳಿ ನಡೆದಾಗ ಕೇಂದ್ರದಲ್ಲಿದ್ದದ್ದು ಕಾಂಗ್ರೆಸ್ ಎಂದು ಮರೆಯಿತೇ'' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, "ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ" ಎಂದು ಹೇಳಿದರೆ, ''ಮೋದಿ-ಯಡಿಯೂರಪ್ಪ ಜೋಡಿಯು ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐನಿಂದ ದಾಳಿ ನಡೆಸುವ ಮೂಲಕ ಬೆದರಿಕೆ ಮತ್ತು ಕುತಂತ್ರದ ಕಪಟ ಆಟ ನಡೆಸಿದ್ದು ಇದರಿಂದಾಗಿ ನಮ್ಮನ್ನು ತಡೆಯಲಾಗದು. ಸಿಡಿಐ ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರವನ್ನು ಕಂಡುಹಿಡಿಯಬೇಕು'' ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದರು.
ಕಾಂಗ್ರೆಸ್ ನಾಯಕರ ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಸಚಿವ ಡಾ. ಕೆ ಸುಧಾಕರ್ ಅವರು, ''ಪ್ರತೀ ಬಾರಿ ಸಿಬಿಐ ದಾಳಿ ನಡೆದಾಗ ಅದು ರಾಜಕೀಯ ಪ್ರೇರಿತ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಅಮಿತ್ ಶಾ ಅವರಿಗೆ 2 ವರ್ಷ ಗುಜರಾತ್ ಪ್ರವೇಶ ನಿಷೇಧಿಸಿದ್ದಾಗ, ಈಗಿನ ಆಂಧ್ರ ಪ್ರದೇಶದ ಸಿಎಂ ಸೇರಿ ಹಲವಾರು ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿಬಿಐ ದಾಳಿ ನಡೆದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಎಂಬುದು ಮರೆತುಹೋಯಿತೇ?'' ಎಂದು ಪ್ರಶ್ನಿಸಿದ್ದಾರೆ.
''ಸಿಬಿಐ, ಈಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇಬೇಕು'' ಎಂದು ಹೇಳಿದ್ದಾರೆ.