ಬೆಂಗಳೂರು, ಅ. 05 (DaijiworldNews/MB) : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಸೇರಿದಂತೆ ಸುಮಾರು 15 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ, ರಾಜ್ಯ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರು ಕೋರ್ಟ್ ತಡೆಯಾಜ್ಞೆ ಇರುವಾಗ ದಾಳಿ ಹೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಸಿಬಿಐ ದಾಳಿ ನಡೆದ ಕೂಡಲೇ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಬಳಿ ಆಗಮಿಸಿದ ಎ.ಎಸ್. ಪೊನ್ನಣ್ಣ ಅವರು, ರಾಜ್ಯ ಸರ್ಕಾರವು ಸಿಬಿಐ ಅಧಿಕಾರಿಗಳ ದಾಳಿಗೆ ಸಮ್ಮತಿ ನೀಡಬೇಕು. ಈ ದಾಳಿಯನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ತಡೆಯಾಜ್ಞೆ ಇರುವ ಸಂದರ್ಭದಲ್ಲಿ ದಾಳಿ ಹೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದು ತನಿಖೆ ನಡೆಸುವುದಕ್ಕೆ ಯಾವುದೇ ಹಸ್ತಕ್ಷೇಪವಿಲ್ಲ. ಆದರೆ ನ್ಯಾಯಯುತವಾದ ತನಿಖೆಯನ್ನು ನಡೆಸಲಿ. ಆದರೆ ಈ ತನಿಖೆಯು ರಾಜಕೀತ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
ಹಲವು ಕಾಂಗ್ರೆಸ್ ನಾಯಕರು ಈ ಸಿಬಿಐ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ದೂರಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು ಸಿಬಿಐ, ಈಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.