ನೊಯ್ಡಾ,ಅ.5 (DaijiworldNews/HR): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಸಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟ ಸಂತ್ರಸ್ಥೆಯ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ಮಾಡಲು ಹೋಗುತ್ತಿದ್ದಾಗ ಮಾತಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಿಯಾಂಕ ಅವರ ಕುರ್ತಾ ಹಿಡಿದು ಎಳೆದಿದ್ದು, ಈ ಕುರಿತು ನೊಯ್ಡಾ ಪೊಲೀಸರು ಕ್ಷಮೆ ಕೇಳಿದ್ದಾರೆ.
ಕಾಂಗ್ರೆಸ್ ಮುಖಂಡರು ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ದೆಹಲಿ-ಉತ್ತರ ಪ್ರದೇಶ ಗಡಿಭಾಗ ಡಿಎನ್ ಡಿ ಮೇಲ್ಸೇತುವೆ ಬಳಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಒಬ್ಬ ಪೊಲೀಸ್ ಅಧಿಕಾರಿ ಪ್ರಿಯಾಂಕಾ ಗಾಂಧಿ ಅವರು ಧರಿಸಿದ್ದ ಕುರ್ತಾವನ್ನು ಹಿಡಿದು ಎಳೆದಿದ್ದರು.
ಇನ್ನು ಈ ಘಟನೆ ಕುರಿತು ನೊಯ್ಡಾ ಪೊಲೀಸರು ಬೇಸರ ವ್ಯಕ್ತಪಡಿಸಿದ್ದು, ಪುರುಷ ಪೊಲೀಸ್ ಅಧಿಕಾರಿ ಪ್ರಿಯಾಂಕಾ ಗಾಂಧಿ ಧರಿಸಿದ್ದ ಕುರ್ತಾವನ್ನು ಹಿಡಿದು ಎಳೆದ ಕ್ರಮ ಸರಿಯಲ್ಲ. ಇದಕ್ಕಾಗಿ ಕ್ಷಮೆ ಕೇಳುತ್ತೇವೆ ಎಂದರು.
ಅಷ್ಟೆ ಅಲ್ಲದೆ ಈ ಘಟನೆಯ ಕುರಿತು ಡಿಸಿಪಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು ಹಿರಿಯ ಮಹಿಳಾ ಅಧಿಕಾರಿಗಳ ಮೂಲಕ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.