ಮುಂಬೈ, ಅ. 05 (DaijiworldNews/MB) : ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಬಂಗಲೆಯ ಒಂದು ಭಾಗವನ್ನು ಮುಂಬೈ ಪಾಲಿಕೆ ಧ್ವಂಸ ಮಾಡಿರುವುದರ ವಿರುದ್ದವಾಗಿ ಬಾಂಬೆ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೋಮವಾರ ಪೂರ್ಣಗೊಳಸಿದ್ದು ತೀರ್ಪನ್ನು ಕಾಯ್ದಿರಿಸಿದೆ.
ತಮ್ಮ ಕಟ್ಟಡವನ್ನು ಧ್ವಂಸ ಮಾಡಿರುವ ಮುಂಬೈ ಪಾಲಿಕೆಯ ಕ್ರಮ ಕಾನೂನು ಬಾಹಿರವೆಂದು ಘೋಷಿಸಿ, ತನಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬಿಎಂಸಿಗೆ ಸೂಚನೆ ನೀಡಬೇಕು ಎಂದು ಕಂಗನಾ ರಣಾವತ್ ಅವರು ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಹಾಗೆಯೇ ಈ ಕಟ್ಟಡ ಧ್ವಂಸವನ್ನು ಮುಂಬೈ ಪೊಲೀಸರ ವಿರುದ್ಧ ನಾನು ಹೇಳಿಕೆ ನೀಡಿದ್ದಕ್ಕೆ ಮಹಾರಾಷ್ಟ್ರ ಸರ್ಕಾರ ಬಿಎಂಸಿ ಮೂಲಕ ನನ್ನ ಮನೆ ಧ್ವಂಸ ಮಾಡಿದೆ. ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಸಂದರ್ಶನವೊಂದರಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪಗಳನ್ನು ಅಲ್ಲಗಳೆದಿರುವ ಬಿಎಂಸಿ, ಕಂಗನಾ ಅವರು ಕಾನೂನು ಬಾಹಿರವಾಗಿ ಬಂಗಲೆ ನವೀಕರಿಸಿದ್ದು ಈ ಹಿನ್ನೆಲೆ ಧ್ವಂಸ ಮಾಡಲಾಗಿದೆ ಎಂದು ಹೇಳಿತ್ತು.