ಲಕ್ನೋ,ಅ.5 (DaijiworldNews/HR): ಉತ್ತರ ಪ್ರದೇಶ ಸರ್ಕಾರ ತನ್ನ ದರ್ಪದ ಮತ್ತು ಸರ್ವಾಧಿಕಾರಿ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು, ಹತ್ರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕರು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದು, ಅವರ ಮೇಲೆ ತನ್ನ ಬಲವನ್ನು ಯೋಗಿ ಸರ್ಕಾರ ಬಳಸುತ್ತಿರುವುದು ನಾಚಿಕೆಗೇಡು ಎಂದು ಮಾಜಿ ಮುಖ್ಯಮಂತ್ರಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾವು ಹತ್ರಸ್ ಸಂತ್ರಸ್ಥೆಯ ಕುಟುಂಬದ ಸದಸ್ಯರೊಂದಿಗೆ ಸೆ. 28ರಂದು ಮಾತುಕತೆ ನಡೆಸಿದ್ದು, ಅಲ್ಲಿ ನಮಗೆ ತಿಳಿದ ಮಾಹಿತಿ ಮನಕಲಕುವಾಗಿತ್ತು. ಆದ ಕಾರಣ ತಾವು ಮಾಧ್ಯಮದ ಮೊರೆ ಹೋಗಿದ್ದು ಎಂದು ಮಾಯಾವತಿ ತಿಳಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಾಧ್ಯಮವನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದು ಮಾತ್ರವಲ್ಲದೆ ವಿರೋಧ ಪಕ್ಷದ ನಾಯಕರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ ಎಂದಿದ್ದಾರೆ.
ಇನ್ನು ಹತ್ರಾಸ್ ಪ್ರಕರಣ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮತ್ತು ಕೃಷಿ ಮಸೂದೆ ಅಂಗೀಕಾರವನ್ನು ವಿರೋಧಿಸಿ ಆ. 2ರ ಶುಕ್ರವಾರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.