ಮೈಸೂರು, ಅ. 05 (DaijiworldNews/MB) : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದು ದೂರುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು, ''ಟಾರ್ಗೆಟ್ ಮಾಡಲು ಡಿಕೆಶಿಯು ಸಿದ್ದರಾಮಯ್ಯರಿಗಿಂತ ಪ್ರಭಾವಿ ನಾಯಕರಾ?'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ''ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಇ.ಡಿ, ಐಟಿಯಿಂದ ದಾಳಿ ನಡೆದಿದೆ. ಈ ತನಿಖೆಯ ಮುಂದುವರಿದ ಭಾಗವಾಗಿ ಈಗ ಸಿಬಿಐ ದಾಳಿ ನಡೆಸಿದೆ. ಅಷ್ಟಕ್ಕೂ ಕಾಂಗ್ರೆಸ್ನಲ್ಲಿ ಶಿವಕುಮಾರ್ ಮಾತ್ರ ಇರುವುದೇ? ಟಾರ್ಗೆಟ್ ಮಾಡಲು ಡಿಕೆಶಿಯು ಸಿದ್ದರಾಮಯ್ಯರಿಗಿಂತ ಪ್ರಭಾವಿ ನಾಯಕರಾ? ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಯಾಕೆ ದಾಳಿ ನಡೆಸಿಲ್ಲ?'' ಎಂದು ಕೇಳಿದ್ದಾರೆ.
''ಭ್ರಷ್ಟಾಚಾರದ ಆರೋಪದಲ್ಲಿ ಡಿಕೆಶಿ ಮನೆ ಮೇಲೆ ದಾಳಿ ನಡೆಸಲಾಗಿದೆ. ತನಿಖೆಯ ಬಳಿಕ ನಿಜಾಂಶ ಹೊರಬರಲಿದೆ. ತನಿಖೆ ಪಾರದರ್ಶಕವಾಗಿ ನಡೆಯಲಿದ್ದು ಇದು ಡಿಕೆಶಿ ಅವರಿಗೆ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲು ದೊರೆತಿರುವ ಒಂದು ಅವಕಾಶ'' ಎಂದು ಹೇಳಿದ್ದಾರೆ.
ಇನ್ನು ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ''117 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೂ ಸರ್ಕಾರ ಬೀಳಲ್ಲ. ಹೀಗಿರುವಾಗ ಈ ದಾಳಿಗೂ ಉಪಚುನಾವಣೆಗೂ ಯಾವುದೇ ನಂಟಿಲ್ಲ. ಕಾಂಗ್ರೆಸ್ ಸುಖಾಸುಮ್ಮನೇ ಎಲ್ಲಾ ವಿಚಾರಕ್ಕೂ ರಾಜಕೀತ ಬಣ್ಣ ಬಳಿಯಬಾರದು'' ಎಂದು ಹೇಳಿದರು.