ಮುಂಬೈ, ಅ. 05 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ವಿಚಾರದಲ್ಲಿ ಮುಂಬೈ ಪೊಲೀಸರ ಘನತೆಗೆ ಧಕ್ಕೆ ತಂದವರು ಈಗ ಕ್ಷಮೆ ಕೇಳಲಿ ಎಂದು ಶೀವಸೇನಾ ಸೋಮವಾರ ಆಗ್ರಹಿಸಿದೆ.
ಈ ಬಗ್ಗೆ ತಮ್ಮ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ ಆಗ್ರಹಿಸಿರುವ ಶಿವಸೇನಾ, ಈಗ ಸುಶಾಂತ್ ಸಾವಿನ ಹಿಂದಿನ ಸತ್ಯ ಬಹಿರಂಗವಾಗಿದೆ. ಸುಶಾಂತ್ ಸಾವು ಹತ್ಯೆಯಲ್ಲ, ಅದು ಆತ್ಮಹತ್ಯೆ ಎಂದು ಏಮ್ಸ್ ಹೇಳಿದೆ. ಅಂಧ ಭಕ್ತರೂ ಈಗ ಏಮ್ಸ್ ನೀಡಿರುವ ವರದಿಯನ್ನು ತಿರಸ್ಕಾರ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದು ಇದಕ್ಕೂ ಮೊದಲು ಸುದ್ದಿ ವಾಹಿನಿಗಳು, ರಾಜಕೀಯ ನಾಯಕರು ಮುಂಬೈ ಪೊಲೀಸರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಯಿಗಳ ಹಾಗೆ ಗೊಬ್ಬೆ ಹೊಡೆಯುತ್ತಿದ್ದ ರಾಜಕೀಯ ಮುಖಂಡರು ಹಾಗೂ ಕೆಲವು ಮಾಧ್ಯಮದವರು ಮೊದಲು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಕೆಲವು ಮಾಧ್ಯಮಗಳು ಮಹಾರಾಷ್ಟ್ರದ ಘನತೆಗೆ ಧಕ್ಕೆ ತರುವ ಯತ್ನ ಮಾಡಿದ್ದು ಸರ್ಕಾರ ಅವರ ವಿರುದ್ದ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಆ ಮಹಾನಟಿ ಈಗ ಎಲ್ಲಿ ಅಡಗಿ ಕುಳಿತಿದ್ದಾರೆ. ಹತ್ರಸ್ನಲ್ಲಿ ದಲಿತ ಯುವತಿಯ ಅತ್ಯಾಚಾರವಾಗಿ ಯುವತಿ ಸಾವನ್ನಪ್ಪಿದ್ದಾಳೆ. ಈಗ ಈ ಆ ನಟಿ ಗ್ಲಿಸರಿನ್ ಹಾಕಿಕೊಂಡೂ ಎರಡು ಹನಿ ಕಣ್ಣೀರು ಸುರಿಸಲಿಲ್ಲವಲ್ಲ ಎಂದು ಕಂಗನಾ ರಣಾವತ್ ಹೆಸರನ್ನು ಉಲ್ಲೇಖ ಮಾಡದೆಯೇ ತಿರುಗೇಟು ನೀಡಿದೆ.