ನವದೆಹಲಿ, ಅ. 05(DaijiworldNews/PY): ಕೇಂದ್ರ ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ಭಾರತದಲ್ಲಿರುವ ಮೃಗಾಲಯಗಳ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಯೋಜನೆ ರೂಪಿಸಲಿದ್ದು, ಈ ಯೋಜನೆಗೆ ಪ್ರತ್ಯೇಕವಾದ ಅನುದಾನ ಮೀಸಲಿರಿಸಲಿದೆ ಎಂದು ಸೋಮವಾರ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಆನ್ಲೈನ್ ಕಾರ್ಯಕ್ರಮ ವೈಲ್ಡ್ಲೈಫ್ ವೀಕ್ 2020ರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಭಾರತದಲ್ಲಿರುವ ಮೃಗಾಲಯಗಳ ಅಭಿವೃದ್ಧಿ ಹಾಗೂ ವಿಸ್ತರಣೆಗೆ ರೂಪಿಸಲಿರುವ ಯೋಜನೆಯ ಅನುದಾನವನ್ನು ಮುಂದಿನ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು. ಈ ಯೋಜನೆಯನ್ನು ರೂಪಿಸುವ ಸಂದರ್ಭ ರಾಜ್ಯಗಳ ಸಲಹೆಯನ್ನು ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ದೇಶದಲ್ಲಿ 160 ಮೃಗಾಲಯಗಳಿವೆ. ಮೃಗಾಲಯಗಳಿಗೆ ಮಕ್ಕಳು ಭೇಟಿ ನೀಡಲು ಕಾಯುತ್ತಿದ್ದಾರೆ. ಮೃಗಾಲಯಗಳ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಯೋಜನೆಯನ್ನು ಮಕ್ಕಳ ಅನುಭವವನ್ನು ಹೆಚ್ಚಿಸುವ ಸಲುವಾಗಿ ತೀರ್ಮಾನ ಮಾಡಲಾಗಿದೆ ಎಂದರು.