ಬೆಂಗಳೂರು, ಅ. 05(DaijiworldNews/PY): ಜೆಡಿಎಸ್ ಅಳುಬುರಕ ರಾಜಕಾರಣ ಎಂದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ನ ಸರ್ವನಾಶ ಎಂದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವ ಪಕ್ಷದಿಂದ ಬೆಳೆದು ಬಂದಿರೋ ಆ ಪಕ್ಷದ ಸರ್ವನಾಶದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಂದಲೇ ಸರ್ವನಾಶವಾಗಲಿದೆ ಎಂದು ತಿಳಿಸಿದ್ದಾರೆ.
ಅವರ ಇತಿಹಾಸವನ್ನು ಕೆದಕಿದರೆ ಅವರ ಸಂಸ್ಕೃತಿ ಬಗ್ಗೆ ತಿಳಿಯುತ್ತದೆ. ಮೊದಲು ಸಿದ್ದರಾಮಯ್ಯ ಅವರು ಚಿಲ್ಲರೆ ರಾಜಕಾರಣವನ್ನು ತ್ಯಜಿಸಬೇಕು ಎಂದಿದ್ದಾರೆ.
ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೇ ಆಗಲಿ ಪ್ರಾಮಾಣಿಕವಾಗಿ ತನ್ನ ಕಾರ್ಯವನ್ನು ಮಾಡಿದರೆ ಇತರರಿಗೆ ಹೆದರಬೇಕಿಲ್ಲ. ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದ್ದೇ ಆದಲ್ಲಿ ಯಾವುದೇ ರೀತಿಯಾದ ತನಿಖೆಯನ್ನು ಎದುರಿಸಲು ಶಕ್ತನಾಗಿರಬೇಕು ಎಂದು ಹೇಳಿದ್ದಾರೆ.
ದೇಶದ ಕಾನೂನು ವ್ಯವಸ್ಥೆಯಲ್ಲಿ ಯಾವತ್ತಿಗೂ ಸತ್ಯಕ್ಕೆ ಜಯ. ಈ ನಿಟ್ಟಿನಲ್ಲಿ ಇನ್ನೂ ಕೆಲವು ಸತ್ಯಗಳು ಹೊರಬರಲಿವೆ ಎಂದಿದ್ದಾರೆ.