ಬೆಂಗಳೂರು, ಅ. 06 (DaijiworldNews/MB) : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು ಈ ನಡುವೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಮುಷ್ಕರ ನಡೆಸದಂತೆ ನಿಷೇಧ ಹೇರಿ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
"ರಾಜ್ಯ ಆರೋಗ್ಯ ಇಲಾಖೆಯ ಸಾರ್ವಜನಿಕ ಸೇವಕರು, ಆರೋಗ್ಯ ಸಿಬ್ಬಂದಿಗಳು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಮುಷ್ಕರ, ಚಳುವಳಿ, ಪ್ರತಿಭಟನೆ ನಡೆಸಿ ಲಸ ಮಾಡಲು ನಿರಾಕರಿಸಿದ್ದರಿಂದ ರಾಜ್ಯಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮುಷ್ಕರ ನಡೆಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ್ ಭಾಸ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.
ಹಾಗೆಯೇ ವಿಪತ್ತು ನಿರ್ವಹಣಾ ಕಾಯ್ದೆಯಿಂದ ಹೊರಡಿಸಿರುವ ಆದೇಶ ಮತ್ತು ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ (ಮುಷ್ಕರಗಳ ನಿಯಂತ್ರಣ) ಕಾಯ್ದೆ -1966ರಡಿ ದಂಡ ಅಥವಾ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಮುಖ್ಯಕಾರ್ಯದರ್ಶಿಗಳು ನೀಡಿದ್ದಾರೆ.
ಕಳೆದ ತಿಂಗಳು ಸುಮಾರು 5 ಸಾವಿರ ಸರ್ಕಾರಿ ವೈದ್ಯರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದ್ದು ಕೊರೊನಾ ಸಂದರ್ಭದಲ್ಲಿ ತೀವ್ರ ಪರಿಣಾಮ ಬೀರಿತ್ತು. ಈ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಸರ್ಕಾರಿ ವೈದ್ಯರಿಗೆ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದರು.