ಬೆಂಗಳೂರು, ಅ. 06 (DaijiworldNews/MB) : ಐದು ವರ್ಷಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಸ್ತಿ ಮೌಲ್ಯ 128.60 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದರೂ ಕೂಡಾ ಈ ಆದಾಯವು ಶೇ.44ರಷ್ಟು ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ವಿಫಲರಾದ ಹಿನ್ನೆಲೆ ಎಫ್ಐಆರ್ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸೋಮವಾರ ಸುಮಾರು 60 ಸಿಬಿಐ ತಂಡದ ಅಧಿಕಾರಿಗಳ ತಂಡವು, ಕರ್ನಾಟಕದಲ್ಲಿ 9, ದೆಹಲಿಯಲ್ಲಿ 4, ಮುಂಬೈನಲ್ಲಿ ಒಂದು ಸೇರಿದಂತೆ ಒಟ್ಟು 14 ಕಡೆ ದಾಳಿ ನಡೆಸಿದ್ದು ಡಿ.ಕೆ.ಶಿ ಅವರ ಆಪ್ತ ಉದ್ಯಮಿ ಸಚಿನ್ ನಾರಾಯಣ್ ಅವರ ಮನೆ ಮೇಲೂ ಸಿಬಿಐ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಡಿ.ಕೆ.ಶಿ ಸಹೋದರ ಡಿ.ಕೆ.ಸುರೇಶ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆದಿದೆ.
ಇನ್ನು ಈ ದಾಳಿಯನ್ನು ಕಾಂಗ್ರೆಸ್ ಉಪಚುನಾವಣೆಯ ಹಿನ್ನೆಲೆ ರಾಜಕೀಯ ಪ್ರೇರಿತ ದಾಳಿ ಎಂದು ಆರೋಪ ಮಾಡುತ್ತಲ್ಲೇ ಇದ್ದು ಇದನ್ನು ಅಲ್ಲಗಳೆದಿರುವ ಬಿಜೆಪಿ ನಾಯಕರು ಆ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಸೋತರೂ ನಮ್ಮ ಅಧಿಕಾರ ಕಳೆದುಕೊಳ್ಳಲ್ಲ ಎಂದು ಹೇಳಿದ್ದಾರೆ. ಈ ಸಿಬಿಐ ದಾಳಿ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ವಾಕ್ಸಮರ ನಡೆಯುತ್ತಿದೆ.