ಬೆಂಗಳೂರು, ಅ. 06 (DaijiworldNews/HR): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ನಿನ್ನೆ ಸಿಬಿಐ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಡಿಕೆಶಿಯವರು ತನಿಖೆ ಎದುರಿಸಿ ಸೀತೆಯಂತೆ ಪವಿತ್ರವಾಗಿ ಹೊರಬರಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಸಿಬಿ ದಾಳಿ ರಾಜಕೀಯ ಪ್ರೇರಿತ ಎಂದು ಎಲ್ಲರೂ ಹೇಳುತ್ತಿದ್ದಾರೆ ಆದರೆ ಯಾವುದೇ ರಾಜಕೀಯಕ್ಕೂ ದಾಳಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಡಿಕೆಶಿ ಮನೆಗೆ ಇದು ಮೊದಲ ಬಾರಿ ಅಲ್ಲ ಈ ಹಿಂದೆಯೂ ಇಂತಹ ದಾಳಿ ನಡೆದಿದೆ. ದಾಳಿ ಸಮಯದಲ್ಲಿ ಅವರ ದೆಹಲಿ ಮತ್ತು ಬೆಂಗಳೂರು ಮನೆಯಲ್ಲಿ ಹಣ ಸಿಕ್ಕಿರುವ ಬಗ್ಗೆ ತಿಳಿದಿದ್ದು, ಇಡಿ ಮತ್ತು ಐಡಿ ಇಲಾಖೆಗಳು ತನಿಖೆ ನಡೆಸುತ್ತಿದೆ ಎಂದರು.
ಇನ್ನು ಸಿಸಿಬಿ ದಾಳಿ ಈ ಹಿಂದೆ ಯಡಿಯೂರಪ್ಪ ಮನೆ ಮೇಲೂ ನಡೆದಿತ್ತು, ಆಗ ನಾವು ಕಾಂಗ್ರೆಸ್ ನಾಯಕರನ್ನು ದೂರಲಿಲ್ಲ ಆದರೆ ಅವರು ಉಪ್ಪು ತಿಂದೋನೋ ನೀರು ಕುಡಿಯಲೇಬೇಕು ಅಂತ ಹೇಳಿಕೆಯನ್ನು ಕೊಟ್ಟಿದ್ದರು. ಈಗ ಡಿಕೆ.ಶಿವಕುಮಾರ್ ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ಸೂಕ್ತ ತನಿಖೆ ಎದುರಿಸಿ ಸೀತೆಯಂತೆ ಪವಿತ್ರವಾಗಿ ಹೊರಗೆ ಬರಲಿ ಎಂದು ಹೇಳಿದ್ದಾರೆ.