ಬೆಂಗಳೂರು, ಅ. 06 (DaijiworldNews/MB) : ''ಸೋಮವಾರ ತನ್ನ ಮನೆ ಹಾಗೂ ಇತರ ಕಡೆಗಳಲ್ಲಿ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ, ನನ್ನ ಪಿಎಗೆ ಹೊಡೆದಿದ್ದಾರೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಿಬಿಐ ಅಧಿಕಾರಿಗಳ ಮೇಲೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
ಮಂಗಳವಾರ ಡಿಕೆಶಿ ಅವರನ್ನು ನಂಜಾವಧೂತ ಸ್ವಾಮೀಜಿಗಳು ಭೇಟಿಯಾಗಿದ್ದುಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ ಅವರು, ''ದಾಳಿ ನಡೆಸಿದ ವೇಳೆ ತನ್ನ ಸಿಬ್ಬಂದಿ ಮೇಲೆ ಸಿಬಿಐ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ. ಸಿಬಿಐ ದಾಳಿಯಿಂದ ನನಗೆ ಯಾವುದೇ ಬೇಸರವಿಲ್ಲ. ಯಾಕೆಂದರೆ ಇವೆಲ್ಲವೂ ಕೂಡಾ ಒಂದು ರಾಜಕೀಯ ಕುತಂತ್ರ'' ಎಂದು ಆರೋಪಿಸಿದರು.
''ನನ್ನ ಪುತ್ರಿ ಮದುವೆಗೆಂದು ಖರೀದಿ ಮಾಡಿ ಇರಿಸಿದ್ದ ಚಿನ್ನಾಭರಣವನ್ನೂ ಕೂಡಾ ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ನನ್ನ ಮನಸಿಗೆ ಅತೀವ ನೋವುಂಟಾಗಿದೆ'' ಎಂದು ಬೇಸರ ವ್ಯಕ್ತಪಡಿಸಿದರು.
''ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಸಕ್ರಿಯನಾಗಿದ್ದು ಇದನ್ನು ಬಿಜೆಪಿ ನಾಯಕರಿಗೆ ನೋಡಲಾಗಲಿಲ್ಲ ಅದಕ್ಕೆ ಉಪಚುನಾವಣೆಗೂ ಮುನ್ನ ಸಿಬಿಐ ದಾಳಿ ನಡೆಯುವಂತೆ ಮಾಡಿದ್ದಾರೆ'' ಎಂದು ದೂರಿದ್ದಾರೆ.
ಸೋಮವಾರ ಸುಮಾರು ಡಿಕೆಶಿ ಮನೆ ನಿವಾಸ, ಆಪ್ತರ ಮನೆ ಸೇರಿ ಹಲವು ಕಡೆ ದಾಳಿ ನಡೆಸಿದ್ದಾರೆ. ಹಾಗೆಯೇ ಡಿಕೆಶಿ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.