ಲಖನೌ, ಅ. 06 (DaijiworldNews/MB) : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಕೆಲವು ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಶಂಕೆಯಲ್ಲಿ ಹತ್ರಸ್ಗೆ ತೆರಳುತ್ತಿದ್ದ ನಾಲ್ವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ ಅವರು ದೆಹಲಿಯಿಂದ ಹತ್ರಸ್ಗೆ ತೆರಳುತ್ತಿದ್ದಾಗ ಮಥುರಾದಲ್ಲಿ ಬಂಧಿಸಲಾಗಿದೆ.
ಕೆಲವು ಅನುಮಾನಾಸ್ಪದ ವ್ಯಕ್ತಿಗಳು ದೆಹಲಿಯಿಂದ ಹತ್ರಸ್ಗೆ ತೆರಳುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ಟೋಲ್ ಪ್ಲಾಜಾದಲ್ಲಿ ಕಾರನ್ನು ತಡೆಯಲಾಗಿದೆ. ಬಳಿಕ ನಾಲ್ವರನ್ನು ವಿಚಾರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಮುಝಾಫರ್ನಗರದ ಆತಿಕ್ ಉರ್ ರೆಹಮಾನ್, ಮಲಪ್ಪುರಂನ ಸಿದ್ದಿಕಿ, ಬಹರೈಚದ ಮಸೂದ್ ಅಹ್ಮದ್ ಮತ್ತು ರಾಮ್ಪುರದ ಅಲಮ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲವು ಸಾಹಿತ್ಯ ಪತ್ರಗಳನ್ನು ವಶಪಡಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ, ನಾಲ್ವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಸಹವರ್ತಿ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಯುಪಿಯಲ್ಲಿ ಪಿಎಫ್ಐ ಕೆಲವು ಹಿಂಸಾತ್ಮಾಕ ಘಟನೆಗಳನ್ನು ನಡೆಸಿದೆ ಎಂದು ಆರೋಪಿಸಲಾಗಿದ್ದು ಉತ್ತರ ಪ್ರದೇಶ ಪೊಲೀಸರು ಪಿಎಫ್ಐನ್ನು ನಿಷೇಧಿಸುವಂತೆ ಕೋರಿದ್ದರು.