ನವದೆಹಲಿ, ಅ. 06 (DaijiworldNews/MB) : ಹತ್ರಸ್ ಸಾಮೂಹಿಕ ಅತ್ಯಾಚಾರದ ಬಳಿಕ ಸಾವನ್ನಪ್ಪಿದ ಯುವತಿಯ ಗುರುತನ್ನು ಟ್ವಿಟರ್ನಲ್ಲಿ ಬಹಿರಂಗ ಮಾಡಿದ ಆರೋಪದಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ನಟಿ ಸ್ವರಾ ಭಾಸ್ಕರ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿಡಬ್ಲ್ಯೂ) ಮಂಗಳವಾರ ನೋಟಿಸ್ ನೀಡಿದೆ ಎಂದು ವರದಿ ತಿಳಿಸಿದೆ.
ಎನ್ಸಿಡಬ್ಲ್ಯೂ ಟ್ವಿಟರ್ನಲ್ಲಿ ಸಂತ್ರಸ್ತೆಯ ಫೋಟೋ ಶೇರ್ ಮಾಡಿದ ಈ ಮೂವರಿಗೂ ಸಂತ್ರಸ್ತೆಯ ಮಾಹಿತಿ ಬಹಿರಂಗದ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದು ಕೂಡಲೇ ಈ ಪೋಸ್ಟ್ಗಳನ್ನು ತೆಗೆಯಬೇಕು ಹಾಗೂ ಇನ್ನು ಮುಂದೆ ಇಂತಹ ಪೋಸ್ಟ್ಗಳನ್ನು ಹಾಕಬಾರದು ಎಂದು ಎಚ್ಚರಿಕೆ ನೀಡಿದೆ.
ಉತ್ತರ ಪ್ರದೇಶದ ಹತ್ರಸ್ನಲ್ಲಿ ಯುವತಿಯ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿದ್ದು ಯುವತಿಯು ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾಳೆ. ಈ ಪ್ರಕರಣವು ದೇಶಾದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.