ಬೆಂಗಳೂರು, ಅ. 06 (DaijiworldNews/MB) : ಸಂಸದ ಡಿ. ಕೆ. ಸುರೇಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರು ಸೋಮವಾರ ಸಿಬಿಐ ಅಧಿಕಾರಿಗಳು ತಮ್ಮ ನಿವಾಸಕ್ಕೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಕೂಡಾ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮೂಲಕ ತಿಳಿಸಿದ್ದು, ಕೊರೊನಾ ಪರೀಕ್ಷೆಯಲ್ಲಿ ನನಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಧ್ಯಕ್ಕೆ ನನ್ನ ಆರೋಗ್ಯ ಸ್ಥಿರವಾಗಿದೆ ಹಾಗೂ ಸುರಕ್ಷಿತವಾಗಿ ಇದ್ದೇನೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿ ಇದ್ದ ಸ್ನೇಹಿತರು, ಬಂಧುಗಳು ಹಾಗೂ ನನ್ನ ಜೊತೆಗೆ ಇದ್ದ ಸಿಬಿಐ ಅಧಿಕಾರಿಗಳು, ಮಾಧ್ಯಮ ಮಿತ್ರರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಸೋಮವಾರವಷ್ಟೇ ಡಿ ಕೆ ಸುರೇಶ್ ಅವರ ಸಹೋದರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿವಾಸ ಹಾಗೂ ಡಿ ಕೆ ಸುರೇಶ್ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.