ನವದೆಹಲಿ, ಅ. 06 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಸಾವು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ರಕ್ಷಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಗುರುವಾರದೊಳಗೆ ತಿಳಿಸಿ ಎಂದು ಮಂಗಳವಾರ ಸುಪ್ರೀಂಕೋರ್ಟ್ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.
ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ ಈ ಪ್ರಕರಣದ ಹಸ್ತಾಂತಕ್ಕೆ ಕೋರಿ ದುಬೆ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯ ಪೀಠ, ಈ ಘಟನೆ ಭಯಾನಕ ಮತ್ತು ಅಸಾಧಾರಣ ಎಂದು ಹೇಳಿದೆ.
ಈ ಪ್ರಕರಣದ ಬಗ್ಗೆ ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ನಡೆಯುತ್ತಿದೆ. ಈ ಹಿನ್ನೆಲೆ ಸಿಬಿಐ ತನಿಖೆ ನಡೆಸಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದ ಹಿನ್ನೆಲೆ ಸುಪ್ರೀಂಕೋರ್ಟ್ ಸಾಕ್ಷಿಗಳ ರಕ್ಷಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಗುರುವಾರದೊಳಗೆ ತಿಳಿಸಿ ಎಂದು ಹೇಳಿದೆ.
ಇನ್ನು ಸರ್ಕಾರದ ಪರ ವಾದ ಮಾಡಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದ ಬಗ್ಗೆ ಅಪಪ್ರಚಾರ ನಡೆಯುತ್ತಿರುವ ಹಿನ್ನೆಲೆ ಈ ಪ್ರಕರಣದ ಮುಕ್ತ ಹಾಗೂ ನ್ಯಾಯಯುತ ತನಿಖೆಗಾಗಿ ಸಿಬಿಐ ತನಿಖೆ ನಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಕಾನೂನು ಕಾಪಾಡಲು ಸಂತ್ರಸ್ತೆಯ ಪೋಷಕರ ಮನವೊಲಿಸಿ ಸಂಪ್ರದಾಯದಂತೆ ರಾತ್ರಿ ವೇಳೆಯಲ್ಲಿ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿರುವುದಾಗಿ ಯೋಗಿ ಸರ್ಕಾರ ನ್ಯಾಯಾಲಯಕ್ಕೆ ಹೇಳಿದೆ.