ಬೆಂಗಳೂರು, ಅ. 06 (DaijiworldNews/HR): ದಾಳಿ ವೇಳೆ ಪ್ರಮುಖವಾಗಿ ಕನಕಪುರ, ಬೆಂಗಳೂರು ಮತ್ತು ದೆಹಲಿಯ ನಮ್ಮ ಮನೆ ಮತ್ತು ಕಛೇರಿಗಳಿಗೆ ಬಂದು ಯಾವುದೇ ಕಿರುಕುಳ ನೀಡದೇ ವೃತ್ತಿಪರವಾಗಿ ನಡೆದುಕೊಂಡ ಸಿಬಿಐ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಡಿರುವ ಸುರೇಶ್, ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಸಿಕ್ಕಿರುತ್ತದೆ. ಅದರಲ್ಲಿ ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ, ಅವರ ಬೆಂಗಳೂರಿನ ಕಛೇರಿಯಲ್ಲಿ 3.5 ಲಕ್ಷ ರೂಪಾಯಿಗಳು ಅಧಿಕಾರಿಗಳಿಗೆ ಸಿಕ್ಕಿರುವುದು ಖಾತ್ರಿ ಪಡಿಸಿದ್ದಾರೆ ಎಂದರು.
ಇನ್ನು ನನ್ನ ಅಣ್ಣ ಡಿಕೆಶಿ ಅವರ ದೆಹಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿರುವುದಿಲ್ಲ. ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ. ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಟಿ ಮತ್ತು ಇಡಿಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ ಸಿಬಿಐ ಸ್ಪಷ್ಟನೆ ತಗೆದುಕೊಂಡಿದೆ ಎಂಬುದಾಗಿ ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಎಂದರು.
ಈ ಹಿಂದೆ ಐಟಿ ಮತ್ತು ಇಡಿ ಅಧಿಕಾರಿಗಳು ಪರಿಶೀಲಿಸಿದ ದಾಖಲೆಗಳ ನಕಲು ಪ್ರತಿಗಳನ್ನು ಸಿಬಿಐ ಕಡೆ ಕೊಟ್ಟಿರುತ್ತೇವೆ. ಇನ್ನು ಮುಂದೆಯೂ ಬೇಕಾದ ಎಲ್ಲಾ ದಾಖಲೆಗಳನ್ನು ಒಪ್ಪಿಸಲು ತಯಾರಿದ್ದೇವೆ. ಈ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಹೊರಬರುವ ವಿಶ್ವಾಸ ನಮಗಿದೆ. ಅಭಿಮಾನಿಗಳು ಮತ್ತು ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಬಳಿಕ ಅವರು ಟ್ವೀಟ್ ಮೂಲಕವೇ ತಮಗೆ ಕೊರೊನಾ ಸೋಂಕು ದೃಢಪಟ್ಟಿರುವುದನ್ನು ತಿಳಿಸಿದ್ದಾರೆ.
ಆದರೆ ತನ್ನ ಮನೆ ಹಾಗೂ ಇತರ ಕಡೆಗಳಲ್ಲಿ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ, ನನ್ನ ಪಿಎಗೆ ಹೊಡೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಿಬಿಐ ಅಧಿಕಾರಿಗಳ ಮೇಲೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.