ಬೆಂಗಳೂರು,ಅ. 06 (DaijiworldNews/HR): ಸಿಬಿಐ, ಐಟಿ, ಇಡಿಗಳನ್ನು ಸಂವಿಧಾನದ ಕಾವಲು ನಾಯಿಗಳೆಂದು ಸಂವಿಧಾನದಲ್ಲಿಯೇ ತಿಳಿಸಲಾಗಿದೆ. ಆದರೆ ಅವುಗಳೆಲ್ಲ ಇದೀಗ ಸಂವಿಧಾನದ ಕಾವಲುನಾಯಿಗಳಲ್ಲ ಹೊರತಾಗಿ ಬಿಜೆಪಿ ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಬಿಐ, ಐಟಿ, ಇಡಿಗಳಿಗೆ ಪ್ರತಿ ಬಾರಿ ವಿರೋಧ ಪಕ್ಷದವರಿಗೆ ದಾಳಿ ನಡೆಸುವಂತೆ ಬಿಜೆಪಿಯವರು ತರಬೇತಿ ನೀಡುತ್ತಾರೆ. ಅದರಂತೆಯೇ ಈ ಎಲ್ಲಾ ಸಂಸ್ಥೆಗಳೂ ಕೂಡ ಕಾರ್ಯ ನಿಎವಹಿಸುತ್ತಿದೆ ಎಂದು ಸಿಬಿಐ, ಐಟಿ,ಇಡಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಳಿಕ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, ಇಂದು ಡಿ.ಕೆ.ಶಿ ಕುಟುಂಬದವರ ಮೇಲೆ ದಾಳಿ ನಡೆದಿರುವುದು ರಾಜಕೀಯ ಪ್ರೇರಿತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಸದಸ್ಯರು ಆರ್ ಟಿ ಜಿ ಎಸ್ ಮೂಲಕ ಹವಾಲಾ ಹಣ ತೆಗೆದುಕೊಳ್ಳುತ್ತಿದ್ದು, ಸರ್ಕಾರದ ಈ ಭ್ರಷ್ಟಾಚಾರ ಸಿಬಿಐ, ಐಟಿ, ಇಡಿಗೆ ಯಾಕೆ ಗೊತ್ತಿಲ್ಲ? ಯಡಿಯೂರಪ್ಪ ಕುಟುಂಬದ ವಿರುದ್ಧ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.