ಮೈಸೂರು, ಅ. 07 (DaijiworldNews/MB) : ಸಿಬಿಐ ಅಧಿಕಾರಿಗಳು ಬಿಜೆಪಿಯವರ ಮನೆ ಮೇಲೆಯೂ ದಾಳಿ ನಡೆಸಲಿ, ಕೋಟಿ ಕೋಟಿ ಹಣ ಅಲ್ಲಿ ಖಂಡಿತವಾಗಿಯೂ ದೊರೆಯುತ್ತದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಅವರು ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಬಿಐ ಅಧಿಕಾರಿಗಳು ನನ್ನೊಂದಿಗೆ ಬಿಜೆಪಿ ನಾಯಕರುಗಳ ಮನೆಗೆ ಬರಲಿ. ಕೆಲವರ ಮನೆಯಲ್ಲಿ ಮೆಷಿನ್ನಲ್ಲಿ ಎಣಿಸಲು ಸಾಧ್ಯವಾಗದಷ್ಟು ಹಣವಿದೆ. ತೂಕ ಹಾಕಿ ಅವರು ಲೆಕ್ಕ ಮಾಡುವಷ್ಟು ಹಣವನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿರುವುದು ರಾಜಕೀಯ ಕುತಂತ್ರವಾಗಿದ್ದು ವಿರೋಧ ಪಕ್ಷಗಳ ವಿರುದ್ದ ಬಿಜೆಪಿ ಮಾಡಿರುವ ಷಡ್ಯಂತ್ರ. ವಿಪಕ್ಷ ನಾಯಕರು ಸರ್ಕಾರದ ವಿರುದ್ದ ಧ್ವನಿ ಎತ್ತದಂತೆ ಇಡಿ, ಸಿಬಿಐ ಸಂಸ್ಥೆಗಳ ಮೂಲಕ ದಾಳಿ ಮಾಡಿಸುತ್ತಾರೆ. ಇಂತಹ ಎಷ್ಟೇ ದಾಳಿ ನಡೆದರೂ ಕೂಡಾ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ದ ಧ್ವನಿ ಎತ್ತುತ್ತೇವೆ, ನಾವೆಂದಿಗೂ ಭಯಪಡುವುದಿಲ್ಲ. ಚುನಾವಣೆ ಬರುವಾಗ ಯಾವಾಗಲೂ ಕಾಂಗ್ರೆಸ್ ಮುಖಂಡರ ಮನೆ ಮೇಲೆಯೇ ದಾಳಿಗಳು ನಡೆಯುತ್ತದೆ. ಸಿಬಿಐ ಎಂಬುದು ಈಗ ಚೋರ್ ಬಚಾವ್ ಇನ್ವೆಸ್ಟಿಗೇಷನ್ ಆಗಿ ಬಿಟ್ಟಿದೆ. ಬಿಜೆಪಿ ಮುಖಂಡರ ಮನೆ ಮೇಲೆ ಯಾಕೆ ನಡೆಯಲ್ಲಾ? ಎಂದು ಪ್ರಶ್ನಿಸಿದ್ದು ಪ್ರಧಾನಿ ಮೋದಿಯವರೇ ನಿಮಗೆ ನೈತಿಕತೆ ಎಂಬುದು ಇದ್ದರೆ ಬಿಜೆಪಿ ನಾಯಕರ ಹಗರಣಗಳ ಬಗ್ಗೆ ತನಿಖೆ ನಡೆಸಿ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಮಾಸ್ಕ್ ಹಾಕದವರಿಗೆ ದಂಡ ಹಾಕುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಈ ಕೊರೊನಾ ಸಂಕಷ್ಟದಿಂದಾಗಿ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಈ ಸಂದರ್ಭ ಮಾಸ್ಕ್ ಹಾಕದವರಿಗೆ 1000 ರೂ. ದಂಡ ಹಾಕುವ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಈ ಭಾರೀ ದಂಡವನ್ನು ಸರ್ಕಾರ ಪಡೆಯಬಾರದು ಎಂದು ಆಗ್ರಹಿಸಿದರು.