ಶಹಜಹಾನಪುರ, ಅ. 07 (DaijiworldNews/MB) : ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು 16 ವರ್ಷದ ಗರ್ಭಿಣಿ ದಲಿತ ಬಾಲಕಿಯನ್ನು ತಂದೆ ಮತ್ತು ಹಿರಿಯ ಸಹೋದರ ಕ್ರೂರವಾಗಿ ಹಲ್ಲೆ ಮಾಡಿ ಬಳಿಕ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ.
ತಂದೆ ಮರ್ಯಾದೆ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಬಂಧಿಸಲಾಗಿದೆ. ಆದರೆ ಸಹೋದರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕೆಲವೇ ಕ್ಷಣದಲ್ಲಿ ಈ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿದ್ದಾರೆ. ಸೆಪ್ಟೆಂಬರ್ 23 ರಿಂದ ಬಾಲಕಿ ಬಾಲಕಿ ನಾಪತ್ತೆಯಾಗಿದ್ದು ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ವರದಿಗಳ ಪ್ರಕಾರ, ಬಾಲಕಿಯನ್ನು ಥಳಿಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಆಕೆಯ ತಲೆಯನ್ನು ಕತ್ತರಿಸಿ ನಂತರ ಅದನ್ನು ನದಿಯ ಬಳಿ ಹೂಳಲಾಗಿದೆ.
"ತನ್ನ ಮಗಳನ್ನು ಗರ್ಭಿಣಿಯಾಗಿದ್ದರಿಂದ ಕೊಂದಿರುವುದಾಗಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ಜನರು ಈ ವಿಷಯವಾಗಿ ಆತನನ್ನು ಸಾರ್ವಜನಿಕವಾಗಿ ಅವಮಾನಿಸಲು ಪ್ರಾರಂಭಿಸಿದ್ದರು. ಬಾಲಕಿಯ ಹಿರಿಯ ಸಹೋದರನೂ ಈ ಕೊಲೆಯಲ್ಲಿ ಭಾಗಿಯಾಗಿದ್ದಾನೆ. ನಾವು ಇಬ್ಬರ ವಿರುದ್ದವೂ ದೂರು ದಾಖಲಿಸಿದ್ದೇವೆ" ಎಂದು ಶಹಜಹಾನ್ ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ತಿಳಿಸಿದರು.
ನಾವು ತಾಯಿ ಮತ್ತು ಇತರ ಸಂಬಂಧಿಕರನ್ನು ಸಹ ಪ್ರಶ್ನಿಸಿದ್ದೇವೆ. ಆದರೆ ಈ ಹತ್ಯೆಯಲ್ಲಿ ಅವರು ಭಾಗಿಯಾಗಿಲ್ಲ. ವಿಚಾರಣೆಯ ವೇಳೆ ಬಾಲಕಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಾಲೆಯ ಮುಖವನ್ನೇ ನೋಡದ ಬಾಲಕಿಯು ತನ್ನ ಮೇಲೆ ಆಗಿರುವ ಕೃತ್ಯದ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿರಲಿಲ್ಲ. ಆಕೆ ಗರ್ಭಿಣಿಯಾಗಿ ದೇಹದಲ್ಲಿ ಬದಲಾವಣೆಯಾದ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಆಕೆಯ ವಿಚಾರ ತಿಳಿದು ಬಂದಿದೆ ಎಂದು ಹೇಳಲಾಗಿದೆ.
ಇನ್ನು ಆಕೆಯು ತಾನು ಗರ್ಭಿಣಿಯಾಗಲು ಯಾರೂ ಕಾರಣವೆಂದು ಹೇಳಿರಲಿಲ್ಲ ಎಂದು ತಿಳಿದು ಬಂದಿದೆ. ಆ ವ್ಯಕ್ತಿಯ ಬಗ್ಗೆ ಪೊಲೀಸರು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆಕೆ ಅಪ್ರಾಪ್ತೆಯಾದ ಕಾರಣ ಇದು ಅತ್ಯಾಚಾರ ಪ್ರಕರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.