ಬರಾಬಂಕಿ (ಉತ್ತರ ಪ್ರದೇಶ), ಅ. 07 (DaijiworldNews/MB) : ಹತ್ರಸ್ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ನಾಲ್ಕು ಮೇಲ್ಜಾತಿಯ ಪುರುಷರು 'ನಿರಪರಾಧಿಗಳು' ಈ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪ ಮಾಡಿರುವ ಬಿಜೆಪಿ ನಾಯಕರೊಬ್ಬರು, ''ಆಕೆ ಆರೋಪಿಗಳೊಂದಿಗೆ ಸಂಬಂಧ ಹೊಂದಿದ್ದಳು'' ಎಂದು ಹೇಳಿದ್ದಾರೆ.
ಸುಮಾರು 44 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಬಿಜೆಪಿ ಮುಖಂಡ ರಣ್ಜೀತ್ ಬಹದ್ದೂರ್ ಶ್ರೀವಾಸ್ತವ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಈ ವಿವಾದಾತ್ಮಕ ಹಾಗೂ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
''ಅಂತಹ ಹುಡುಗಿಯರು ಕೆಲವು ನಿರ್ದಿಷ್ಟ ಜಾಗದಲ್ಲೇ ಸತ್ತಿದ್ದಾರೆ. ಅವರು ಕಬ್ಬು, ಜೋಳ ಮತ್ತು ರಾಗಿ ಹೊಲಗಳಲ್ಲಿ ಅಥವಾ ಪೊದೆಗಳು, ಕಾಡುಗಳಲ್ಲಿ ಸತ್ತಿದ್ದಾರೆ. ಅಂತಹ ಹುಡುಗಿಯರು ಭತ್ತ ಅಥವಾ ಗೋಧಿ ಹೊಲಗಳಲ್ಲಿ ಯಾಕೆ ಸತ್ತಿಲ್ಲ'' ಎಂದು ಪ್ರಶ್ನಿಸಿದ್ದಾರೆ.
''ಹತ್ರಸ್ನ ಯುವತಿಯು ಈ ಆರೋಪಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ಆಕೆಯೇ ಅವರನ್ನು ಸೆಪ್ಟೆಂಬರ್ 14 ರಂದು ಹೊಲಕ್ಕೆ ಕರೆದಿರಬೇಕು. ಈ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನ್ಯೂಸ್ ಚಾನೆಲ್ಗಳಲ್ಲಿ ಬಿತ್ತರವಾಗಿದೆ. ಬಳಿಕ ಆ ಯುವತಿ ಸಿಕ್ಕಿಬಿದ್ದಿರಬೇಕು'' ಎಂದು ಹೇಳಿದ್ದಾರೆ.
''ಕಬ್ಬು, ಜೋಳ ಮತ್ತು ರಾಗಿ ಮುಂತಾದ ಬೆಳೆಗಳು ಎತ್ತರವಾಗಿ ಬೆಳೆಯುತ್ತದೆ. ಈ ಹೊಲದ ಒಳಗೆ ವ್ಯಕ್ತಿ ಇದ್ದರೆ ಗೊತ್ತಾಗುವುದಿಲ್ಲ. ಆದರೆ ಗೋಧಿ ಮತ್ತು ಭತ್ತ ಕೇವಲ ಮೂರು ಅಥವಾ ನಾಲ್ಕು ಅಡಿ ಎತ್ತರಕ್ಕೆ ಬೆಳೆಯುತ್ತದೆ'' ಎಂದು ಕೂಡಾ ಹೇಳಿದ್ದಾರೆ.
''ಈ ಪ್ರಕರಣದಲ್ಲಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸುವವರೆಗೆ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಬೇಕು'' ಎಂದು ಆರೋಪಿಗಳಾದ ನಾಲ್ವರನ್ನು ಬಿಜೆಪಿ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.
"ಈ ಹುಡುಗರು ನಿರಪರಾಧಿಗಳು ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅವರನ್ನು ಬಿಡುಗಡೆ ಮಾಡದಿದ್ದರೆ ಅವರಿಗೆ ಮಾನಸಿಕ ಹಿಂಸೆಯಾಗುತ್ತದೆ. ಬಳಿಕ ಅವರನ್ನು ಸರಿ ಮಾಡುವವರು ಯಾರು? ಸರ್ಕಾರ ಈ ಯುವಕರಿಗೆ ಪರಿಹಾರವನ್ನು ನೀಡುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.
ಇನ್ನು ಶ್ರೀವಾಸ್ತವ ಅವರ ಹೇಳಿಕೆಗೆ ತಿರುಗೇಟು ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, "ಶ್ರೀವಾಸ್ತವ ಅವರು ಯಾವುದೇ ಪಕ್ಷದ ನಾಯಕ ಎಂದು ಕರೆಯಲು ಯೋಗ್ಯರಲ್ಲ. ಅವರದ್ದು ಅನಾರೋಗ್ಯದ ಮನಸ್ಥಿತಿ. ಅವರಿಗೆ ನೋಟಿಸ್ ಕಳುಹಿಸಲಿದ್ದೇನೆ" ಎಂದು ಹೇಳಿದರು.
ಇನ್ನು ಮತ್ತೋರ್ವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು, "ಅತ್ಯಾಚಾರದ ಘಟನೆಗಳನ್ನು ತಡೆಗಟ್ಟಲು ಯುವತಿಯರು ಸಂಸ್ಕಾರದಿಂದ ಇರಬೇಕು" ಎಂಬಂತಹ ಹೇಳಿಕೆಗಳನ್ನು ನೀಡಿ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.