ಭೋಪಾಲ್, ಅ. 07 (DaijiworldNews/MB) : ಮಧ್ಯಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಮತ್ತು ಇತರ ಎಂಟು ಜನರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಅರವಿಂದ್ ಮಹೋರ್ ಸೋಮವಾರ ಲಿಖಿತ ದೂರಿನ ಆಧಾರದ ಮೇಲೆ ಕಮಲ್ ನಾಥ್ ಮತ್ತು ಇತರ ಎಂಟು ಜನರ ವಿರುದ್ಧ ದಾಟಿಯಾ ಜಿಲ್ಲೆಯ ಭಂಡಾರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ ಪ್ರಕಾರ, ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ನಹರ್ ಸಿಂಗ್ ಯಾದವ್, ಅಕ್ಟೋಬರ್ 5 ರಂದು ಭಾಂದರ್ನ ಮಂಡಿ ಆವರಣದಲ್ಲಿ ಸಭೆ ನಡೆಸಲು ಅನುಮತಿ ಕೋರಿದ್ದಾರೆ. ಕೋವಿಡ್ -19 ಮಾನದಂಡಗಳಿಗೆ ಬದ್ಧರಾಗಿರುವ ಷರತ್ತಿನೊಂದಿಗೆ 100 ಜನರು ಸೇರಲು ಅನುಮತಿ ನೀಡಲಾಗಿದೆ. ಈ ಸಭೆಯಲ್ಲಿ ಕಮಲ್ ನಾಥ್ ಹಾಗೂ ಪಕ್ಷದ ಅಭ್ಯರ್ಥಿ ಪೂಲ್ ಸಿಂಗ್ ಇತರರು ಉಪಸ್ಥಿತರಿದ್ದರು. ಆದರೆ ಪೊಲೀಸರು ಇದರ ವಿಡಿಯೋ ನೋಡಿದಾಗ 2,000-2,500 ಜನರು ಹಾಜರಿರುವುದು ಕಂಡು ಬಂದಿದೆ. ಇದು ಕೋವಿಡ್ -19 ಸುರಕ್ಷತಾ ಮಾರ್ಗಸೂಚಿಗಳಿಗೆ ವಿರುದ್ದವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳ ಮತದಾನ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.