ಬೆಂಗಳೂರು, ಅ. 07 (DaijiworldNews/MB) : ಮಾಸ್ಕ್ ಹಾಕದವರಿಗೆ ವಿಧಿಸಲಾಗುವ ದಂಡ ಪ್ರಮಾಣವನ್ನು ರಾಜ್ಯ ಸರ್ಕಾರವು ಮತ್ತೆ ಪರಿಷ್ಕರನೆ ಮಾಡಿದ್ದು ಈಗ ಪರಿಷ್ಕೃತ ದಂಡ ಪ್ರಮಾಣ ಪ್ರಕಟಿಸಿದೆ. ಈ ಪರಿಷ್ಕೃತ ದಂಡ ಪ್ರಮಾಣದ ಪ್ರಕಾರವಾಗಿ ಮಾಸ್ಕ್ ಧರಿಸದವರು ನಗರ ಪ್ರದೇಶದಲ್ಲಿ 250 ರೂ, ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ತೆರಬೇಕಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದ್ದು, ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ನಿಯಮಪಾಲನೆ ಕಡ್ಡಾಯ. ಸಾರ್ವಜನಿಕರ ಪ್ರತಿಕ್ರಿಯೆ, ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ, ಮಾಸ್ಕ್ ಧರಿಸದಿದ್ದಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 250 ರೂ, ಗ್ರಾಮೀಣ ಪ್ರದೇಶದಲ್ಲಿ 100 ರೂ.ಗಳಿಗೆ ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಆದೇಶಿಸಿದ್ದಾರೆ ಎಂದು ತಿಳಿಸಿದೆ.
ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಲು ಮಾನ್ಯ ಮುಖ್ಯಮಂತ್ರಿಗಳು ಕೋರಿದ್ದಾರೆ ಎಂದು ಸಿಎಂ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.
ಕೆಲ ದಿನಗಳ ಹಿಂದೆ ದಂಡ ಪ್ರಮಾಣವನ್ನು ಪರಿಷ್ಕರಣೆ ಮಾಡಿದ್ದ ಸರ್ಕಾರ ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ದಂಡ ಪ್ರಮಾಣವನ್ನು 1 ಸಾವಿರ ರೂಪಾಯಿಗೆ ಏರಿಕೆ ಮಾಡಿತ್ತು. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರ ಮೇಲೆ ಭಾರೀ ಪ್ರಮಾಣದ ಹೊರೆ ಹಾಕಬಾರದು ಎಂದು ವಿಪಕ್ಷ ನಾಯಕರು ಒತ್ತಾಯಿಸಿದ್ದರು.