ರಾಯಚೂರು, ಅ. 07 (DaijiworldNews/MB) : ''ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ತಿಳಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ'' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.
ಈ ಬಗ್ಗೆ ಬುಧವಾರ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ರಾಜ್ಯದಲ್ಲಿ ಶಿರಾ, ರಾಜರಾಜೇಶ್ವರಿ ನಗರ ಸೇರಿ ಕೆಲವೆಡೆ ಉಪಚುನಾವಣೆ ನಡೆಯುತ್ತೆ. ಇದರಲ್ಲಿ ಕಾಂಗ್ರೆಸ್ ಖಂಡಿತವಾಗಿ ಗೆಲ್ಲುತ್ತೆ ಎಂದು ತಿಳಿದ ಬಳಿಕ ಬಿಜೆಪಿ ಸಿಬಿಐ ದಾಳಿ ನಡೆಸಿದೆ. ಬಿಜೆಪಿ ಚುನಾವಣೆ ಗೆಲ್ಲಲು ಬೇಕಾಗಿ ಯಾವ ದಾರಿಯನ್ನು ಹಿಡಿಯಲು ಸಿದ್ದವಿದೆ ಎಂದು ದೂರಿದ್ದು ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು ಖಚಿತ'' ಎಂದು ಹೇಳಿದ್ದಾರೆ.
ಇನ್ನು ''ಸಿಬಿಐ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ ಅವರು, ಸಿಬಿಐ ಅಧಿಕಾರಿಗಳು ಆಡಳಿತ ನಡೆಸುವ ಪಕ್ಷದ ಏಜೆಂಟ್ಗಳಂತೆ, ಅವರ ಕೈಗೊಂಬೆಯಂತೆ ವರ್ತಿಸುತ್ತಾರೆ. ಆದರೆ ಅವರು ಹಾಗೆ ಮಾಡುವುದು ತಪ್ಪು ಎಂದು ಹೇಳಿದ ಅವರು, ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದೆ'' ಎಂದು ಹೇಳಿದ್ದಾರೆ.