ತುಮಕೂರು, ಅ. 07 (DaijiworldNews/MB) : ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು ಅವನಂತ ಪೆದ್ದ ಯಾರೂ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಾ. ಸಿ.ಎಂ. ರಾಜೇಶ್ ಗೌಡ ಬಿಜೆಪಿ ಸೇರಲು ನಾನು ಕಾರಣ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿ, ''ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಅವನಂತ ಪೆದ್ದ ಯಾರೂ ಇಲ್ಲ'' ಎಂದು ಹೇಳಿದ್ದಾರೆ.
''ರಾಜೇಶ್ ತಂದೆ ಸಿ.ಪಿ. ಮೂಡಲಗಿರಿಯಪ್ಪ ಈ ಹಿಂದೆ ಜೆಡಿಎಸ್ನಲ್ಲಿ ಇದ್ದವರು. ಹಾಗೇ ಹೆಚ್ಡಿಕೆ ರಾಜೇಶ್ನನ್ನು ಬಿಜೆಪಿಗೆ ಕಳುಹಿಸಿದ್ದಾರೆ ಎಂದು ನಾನು ಹೇಳುತ್ತೇನೆ. ರಾಜೇಶ್, ನನ್ನ ಮಗನ ಸ್ನೇಹಿತನೇ ಹೊರತು ನನ್ನ ಸ್ನೇಹಿತನಲ್ಲ. ಅಷ್ಟಕ್ಕೂ ನನ್ನ ವಯಸ್ಸು ಎಷ್ಟು'' ಎಂದು ಪ್ರಶ್ನಿಸಿದ ಅವರು, ''ರಾಜಕೀಯವೇ ಬೇರೆ ಸ್ನೇಹವೇ ಬೇರೆ'' ಎಂದು ಹೇಳಿದ್ದಾರೆ.
''ಕುಮಾರಸ್ವಾಮಿ ಸ್ವಲ್ಪ ಜವಾಬ್ದಾರಿಯುತವಾದ ಹೇಳಿಕೆಗಳನ್ನು ನೀಡಬೇಕು. ಕುಮಾರಸ್ವಾಮಿಯ ಎಲ್ಲಾ ರಾಜಕೀಯ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ'' ಎಂದು ಹೇಳಿದ್ದಾರೆ.
''ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ನಾವು ವಿಜಯರಾಗುತ್ತೇವೆ. ಶಿರಾದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಕೂಡಾ ಅನುಕಂಪ, ಕರುಣೆಯಿಂದ ಜೆಡಿಎಸ್ ಜಯ ಗಳಿಸಲ್ಲ'' ಎಂದು ಹೇಳಿದರು.