ನವದೆಹಲಿ, ಅ. 07 (DaijiworldNews/MB) : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಹಾಯಕಿ ವಿಕೆ ಶಶಿಕಲಾ ಅವರಿಗೆ ಸೇರಿದ್ದ ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಬೇನಾಮಿ ತಡೆ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆ ಬುಧವಾರ ಜಪ್ತಿ ಮಾಡಿಕೊಂಡಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದಾಯ ತೆರಿಗೆ ಇಲಾಖೆಯು ದಿ.ಜಯಾ ಆಪ್ತೆ ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ ಹೆಸರಿನಲ್ಲಿ ಸಿರುಥವೂರ್ ಮತ್ತು ಕೋಡನಾಡು ಪ್ರದೇಶದಲ್ಲಿ ಆಸ್ತಿಯನ್ನು ಪತ್ತೆ ಹಚ್ಚಿತ್ತು. ಹಾಗೆಯೇ ಬೇನಾಮಿ ತಡೆ ಘಟಕ ನೋಟಿಸ್ ಅನ್ನು ಕೂಡಾ ಆದಾಯ ತೆರಿಗೆ ಇಲಾಖೆಯು ನೀಡಿದೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2017ರಲ್ಲಿ ತಮಿಳುನಾಡು, ಪುದುಚೇರಿಯಲ್ಲಿ ಶಶಿಕಲಾ ಹಾಗೂ ಅವರ ಪತಿ ನಟರಾಜನ್, ಸಂಬಂಧಿಗಳಿಗೆ ಸೇರಿದ್ದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದರು. ಹಾಗೆಯೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.