ನವದೆಹಲಿ, ಅ. 08 (DaijiworldNews/MB) : ದೇಶದ ವಾಯುಸೇನೆ ಗುರುವಾರ 88ನೇ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಭಾಶಯಗಳನ್ನು ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಾಯುಪಡೆ ದಿನದಂದು ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳು. ಎಂಭತ್ತೆಂಟು ವರ್ಷಗಳ ಸಮರ್ಪಣೆ, ತ್ಯಾಗ ಮತ್ತು ಉತ್ಕೃಷ್ಟತೆಯು ಭಾರತೀಯ ವಾಯುಪಡೆಯ ಪ್ರಯಾಣವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ವಾಯುಪಡೆ ಎಂದಿಗೂ ರಾಷ್ಟ್ರದ ಆಕಾಶವನ್ನು ಕಾಪಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ಏನೇ ಆದರೂ ನೀಲಿ ಆಕಾಶಗಳು ಹಾಗೂ ನೀವು ಸುರಕ್ಷಿತರಾಗಿರುವಂತೆ ಶುಭಾಶಯಗಳನ್ನು ಕೋರುತ್ತೇನೆಂದು ಹೇಳಿದ್ದಾರೆ.
ಭಾರತೀಯ ವಾಯುಪಡೆ ದಿನವನ್ನು ಪ್ರಥಮ ಬಾರಿಗೆ 1932, ಅಕ್ಟೋಬರ್ 8 ರಂದು ಆಚರಿಸಲಾಯಿತು. ಅಲ್ಲಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ ಭಾರತವು 88ನೇ ವರ್ಷದ ವಾಯುಪಡೆ ದಿನವನ್ನು ಆಚರಿಸುತ್ತಿದೆ.
ನಮ್ಮ ವಾಯುಪಡೆಯು ನೆರೆ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದು ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್, ಆಪರೇಷನ್ ಪೂಮಲೈ, ಆಪರೇಷನ್ ರಾಹತ್ ಇತ್ಯಾದಿಗಳು ಅತ್ಯಂತ ಪ್ರಮುಖವಾಗಿವೆ. ಅಷ್ಟೇ ಅಲ್ಲದೇ ದೇಶದಲ್ಲಿ ಪ್ರಕೃತಿ ವಿಕೋಪಗಳು, ಭಯೋತ್ಪಾದಕರ ದಾಳಿ, ಗಲಭೆ ನಡೆದಾಗ ಜನರನ್ನು ರಕ್ಷಿಸುವ ಕಾರ್ಯವನ್ನೂ ವಾಯುಸೇನೆ ಮಾಡಿದೆ.