ನವದೆಹಲಿ, ಅ. 08 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಈ ಅನ್ಯಾಯದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿಯುವುದು ಬಹಳ ಮುಖ್ಯ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ಸಂದರ್ಭದ ವಿಡಿಯೊ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೋಡಿ ಹತ್ರಸ್ ಸಂತ್ರಸ್ತೆಯ ಕುಟುಂಬವು ಯುಪಿ ಸರ್ಕಾರದ ಶೋಷಣೆ ಮತ್ತು ದೌರ್ಜನ್ಯವನ್ನು ಹೇಗೆ ಎದುರಿಸಬೇಕಾಗಿದೆ. ಅವರಿಗೆ ಆದ ಅನ್ಯಾಯದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿಯುವುದು ಅತಿ ಮುಖ್ಯ ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಕುಟುಂಬದೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿಯವರು, ಕುಟುಂಬದವರ ಧ್ವನಿಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಕುಟುಂಬದವರು ಯಾವುದೇ ಸಂದರ್ಭ ಬಂದರೂ ಗ್ರಾಮ ತೊರೆಯಬಾರದು. ಗ್ರಾಮದಿಂದ ಹೊರಹೋಗಿ ಎಂದು ನಿಮ್ಮ ಮೇಲೆ ಒತ್ತಡ ಹೇರಲು ಯಾರಿಂದಲೂ ಸಾಧ್ಯವಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.
ಹಾಗೆಯೇ ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಹತ್ರಸ್ನಲ್ಲಿ ಕೆಲವು ದಿನಗಳ ಹಿಂದೆ ಹತ್ರಸ್ನಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ದುರುಳರು ಆಕೆಯ ಮೂಲೆ, ನಾಲಗೆ ತುಂಡಾಗುವಂತೆ ಹಿಂಸೆ ನೀಡಿದ್ದರು. ಬಳಿಕ ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಇದೀಗ ಈ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಏತನ್ಮಧ್ಯೆ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ಆಕೆಯ ಕುಟುಂಬಸ್ಥರಿಗೆ ನೀಡದೆ ರಾತ್ರೋರಾತ್ರಿ ಅಂತ್ಯಕ್ರಿಯೆ ನಡೆಸಿದ್ದು ಕುಟುಂಬದವರನ್ನು ಗೃಹ ಬಂಧನದಲ್ಲಿರಿಸಿದ್ದರು.