ಶಿಮ್ಲಾ, ಅ. 08(DaijiworldNews/PY): ಸಿಬಿಐ ಮಾಜಿ ನಿರ್ದೇಶಕ, ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಶ್ವನಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದ್ದು, ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಚಾವ್ಲಾ ಅವರು ಘಟನೆಯನ್ನು ದೃಢಪಡಿಸಿದ್ದಾರೆ.
ಸಿಬಿಐನಿಂದ ನಿವೃತ್ತಿಯಾದ ಬಳಿಕ ಅಶ್ವನಿ ಅವರು ಶಿಮ್ಲಾದಲ್ಲಿ ನೆಲೆಸಿದ್ದರು. ಹಾಗೂ ಅಲ್ಲಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಜೀವನದಲ್ಲಿ ತುಂಬಾನೆ ಬೇಸರಗೊಂಡಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಶ್ವನಿ ಬರೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಶ್ವನಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಾಕಿಂಗ್ ಗೆ ಹೋಗಿದ್ದರು. ಅವರ ಪತ್ನಿ, ಮಗ ಹಾಗೂ ಮಗಳು ಕೆಳ ಮಹಡಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಶ್ವನಿ ಅವರು ಆ. 2006ರಿಂದ ಜು. 2008ರವರೆಗೆ ಹಿಮಾಚಲ ಪ್ರದೇಶದಲ್ಲಿ ಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. 2013ರಿಂದ 2014ರವರೆಗೆ ನಾಗಾಲ್ಯಾಂಡ್ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.