ಜಾರ್ಗ್ರಾಮ್, ಅ. 08 (DaijiworldNews/MB) : ಇತರೆ ರಾಜ್ಯಗಳಿಂದ ಬರುವ ಟ್ರಕ್ಗಳು ಮತ್ತು ಲಾರಿಗಳ ಮೂಲಕ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆತಂಕ ವ್ಯಕ್ತಪಡಿಸಿದ್ದು ಟ್ರಕ್ ಟಯರ್ಗಳನ್ನು ಪರಿಶೀಲಿಸಲು ಸೂಚಿಸಿದ್ದಾರೆ. ಕೊರೊನಾ ವೈರಸ್ ಸೋಂಕು ಗಾಳಿಯಲ್ಲಿ ಹರಡುವ ಸಾಧ್ಯತೆಯ ಬಗ್ಗೆ, ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದ್ದು ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತರರು ಏನು ಹೇಳಿದರೂ, ಕೊರೊನಾ ಗಾಳಿಯಲ್ಲಿ ಹರಡುತ್ತದೆ. ವೈರಸ್ ಗಾಳಿಯ ಮೂಲಕ ಎಷ್ಟು ದೂರ ಹರಡುತ್ತದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಎಲ್ಲರೂ ವಿಭಿನ್ನ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವ ಸಮಯದವರೆಗೆ ಮುನ್ನೆಚ್ಚರಿಕೆ ವಹಿಸುವುದು ನಾವು ಮಾಡಬೇಕು ಎಂದು ಆಡಳಿತ ಸಭೆಯಲ್ಲಿ ಹೇಳಿದರು.
ಈ ವಾರದ ಆರಂಭದಲ್ಲಿ ಸಿಡಿಸಿ ತನ್ನ ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕು ವಾಯು ಮಾರ್ಗವಾಗಿ ಹರಡುವ ಸಾಧ್ಯತೆಯ ಬಗ್ಗೆ ತಿಳಿಸಿದೆ. ಇದಕ್ಕೂ ಮುನ್ನ ಒಂದು ತಿಂಗಳ ಹಿಂದೆ ಇದೇ ಎಚ್ಚರಿಕೆಯನ್ನು ಸಿಡಿಸಿ ನೀಡಿತ್ತು. ವೈರಸ್ನ ಸಣ್ಣ ಹನಿಗಳು ಮತ್ತು ಕಣಗಳು ಏರೋಸಾಲ್ಗಳು ನಿಮಿಷದಿಂದ ಗಂಟೆಗಳವರೆಗೆ ಗಾಳಿಯಲ್ಲಿ ಇರಬಹುದು. ಇದರಿಂದಾಗಿ ಕೆಲವು ಜನರಿಗೆ ಸೋಂಕು ತಗಲುವ ಸಾಧ್ಯತೆಯಿದೆ ಎಂದು ಹೇಳಿತ್ತು.
ಜಾರ್ಗ್ರಾಮ್ನಲ್ಲಿ ನಡೆದ ಆಡಳಿತ ಸಭೆಯಲ್ಲಿ ಅಧಿಕಾರಿಗಳಿಗೆ ರಾಜ್ಯಕ್ಕೆ ಬರುವ ಟ್ರಕ್, ಲಾರಿಗಳ ಟಯರ್ಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು. ಜಾರ್ಗ್ರಾಮ್ ರಾಜ್ಯದ ಗಡಿ ಜಿಲ್ಲೆಯಾಗಿದ್ದು ಕಳೆದ ಕೆಲವು ವಾರಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಟೋಲ್ ಪ್ಲಾಜಾಗಳ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಕೆಲವು ಟ್ರಕ್ಗಳ ಟಯರ್ಗಳನ್ನು ನಾವು ಪರೀಕ್ಷಿಸಬೇಕಾಗಿದೆ. ಬಟ್ಟೆ ಮತ್ತು ಶಾಪಿಂಗ್ ಬ್ಯಾಗ್ಗಳ ಮೂಲಕ ವೈರಸ್ ಹರಡಲು ಸಾಧ್ಯವಾದರೆ, ಏಕೆ ಟಯರ್ನಿಂದ ಹರಡಬಾರದು ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಆದರೆ ಚಲಿಸುವ ವಾಹನಗಳ ಟಯರ್ ಮೂಲಕ ವೈರಸ್ ಹರಡಬಹುದಾದ ಸಾಧ್ಯತೆಯ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ.
ನಾನು ಇರುವ ಪ್ರದೇಶದಲ್ಲಿ ಒಂದು ಕುಟುಂಬದ ಆರು ಮಂದಿಗೂ ಪಾಸಿಟಿವ್ ಆಗಿದೆ. ಅವರಿಂದ, ಈ ರೋಗವು ಇತರ 36 ಜನರಿಗೆ ಹರಡಿತ್ತು. ಹಾಗಾಗಿ ಅವರ ಮನೆ ಇರುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಾನು ನಿಲ್ಲಿಸಿದ್ದೇನೆ. ಏಕೆಂದರೆ ವಾಹನಗಳು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುವಾಗ ಅವು ರೋಗಗಳನ್ನು ಹರಡಬಹುದು. ವಾಹನಗಳ ಟಯರ್ಗಳಿಂದ ರೋಗ ಹರಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಪ್ರದೇಶದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ ಬಳಿಕ ರೋಗ ಹರಡುವುದು ನಿಂತಿತು. ಆದರೆ ಸೆಪ್ಟೆಂಬರ್ 8 ರಂದು ನಿರ್ಬಂಧಗಳನ್ನು ಹಿಂತೆಗೆದುಕೊಂಡ ಕೂಡಲೇ ಮತ್ತೆ ಸೋಂಕು ಹರಡಲು ಪ್ರಾರಂಭಿಸಿತು ಎಂದು ಹೇಳಿದ್ದಾರೆ.