ಹತ್ರಸ್, ಅ. 08 (DaijiworldNews/MB) : ಹತ್ರಸ್ ಸಾಮೂಹಿಕ ಅತ್ಯಾಚಾರ ಕೊಲೆ ಪ್ರರಕಣಕ್ಕೆ ಸಂಬಂಧಿಸಿ ಗ್ರಾಮದಲ್ಲಿ ಸ್ಥಳೀಯರನ್ನು ಪ್ರಚೋದಿಸಲು ಯತ್ನಿಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕನ ಶ್ಯೋರಾಜ್ ಜೀವನ್ ಎಂಬವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಜಾತಿ ಹಿಂಸಾಚಾರವನ್ನು ಹೆಚ್ಚಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದು ಇದರ ವಿಡಿಯೋ ದಾಖಲೆಗಳು ಇವೆ ಎಂದು ಹೇಳಲಾಗಿದೆ. ಜೀವನ್ ಕೇಂದ್ರ ಸಂಪುಟದಲ್ಲಿ ಮಾಜಿ ರಾಜ್ಯ ಸಚಿವರು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ.
ಹತ್ರಾಸ್ ಪೊಲೀಸರು ಶ್ಯೋರಾಜ್ ಜೀವನ್ ವಿರುದ್ಧ ದೇಶದ್ರೋಹದ ಆರೋಪದಡಿ ಬುಧವಾರ ರಾತ್ರಿ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ದಲಿತ ಕಾಂಗ್ರೆಸ್ ನಾಯಕ, ಸೆಪ್ಟೆಂಬರ್ 19ರಂದು ಅಲಿಗಢದ ಜೆಎಲ್ಎನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದಾಗ ಸಂತ್ರಸ್ತೆಯ ಕುಟುಂಬವನ್ನು ಅವರು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ.
ಹತ್ರಸ್ನಲ್ಲಿ ಜಾತಿ ಆಧಾರಿತ ಭಾರಿ ಗಲಭೆಗಳನ್ನು ಉಂಟುಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ. ಒಂದು ವೇಳೆ ಗಲಭೆ ಶುರವಾದರೆ ಹಿಂಸಾಚಾರವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
"ಗುಂಡುಗಳು ಸುತ್ತಲೂ ಹಾರಲು ಪ್ರಾರಂಭಿಸಿದ ನಂತರವೇ ರಾಹುಲ್ ಗಾಂಧಿ ದೃಶ್ಯಕ್ಕೆ ಬರುತ್ತಾರೆ" ಎಂದು ಜೀವನ್ ಹೇಳಿರುವುದು ಕಂಡುಬಂದಿದೆ.
"ಪ್ರತಿ ಕಡೆಯಿಂದ ಇಬ್ಬರು ಜನರು ಸಾಯಬೇಕು. ಒಬ್ಬ ನಾಯಕ ಸಾಯಬೇಕು ಅಥವಾ ಕೆಲವು ಸಾಮಾನ್ಯ ಜನರು ಸಾಯಬೇಕು. ಭೀಕರ ಘರ್ಷಣೆ ಉಂಟಾಗುತ್ತದೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ರಕ್ತಸಿಕ್ತ ಹೋರಾಟವಾಗಿದೆ. ಗಲಭೆಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪರಿಸ್ಥಿತಿ ಹದಗೆಡುತ್ತಿದೆ. ಏಕೆಂದರೆ ವಾಲ್ಮೀಕಿ ಸಮಾಜವು ಹೋರಾಟದ ಸಮುದಾಯವಾಗಿದೆ. ಅನೇಕರನ್ನು ಹತ್ಯೆ ಮಾಡಲಾಗುತ್ತದೆ, ಅನೇಕರು ಕೊಲ್ಲಲ್ಪಡುತ್ತಾರೆ. ನಾವು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ" ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.