ಹತ್ರಸ್, ಅ. 08 (DaijiworldNews/MB) : ದೇಶದಾದ್ಯಂತ ಭಾರೀ ಆಕ್ರೋಶ, ಪ್ರತಿಭಟನೆಗಳಿಗೆ ಕಾರಣವಾದ ಹತ್ರಸ್ನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳಾದ ನಾಲ್ವರು ತಾವು ನಿರಪರಾಧಿಗಳು ಎಂದು ಹೇಳಿಕೊಂಡು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಕೈ ಬರವಣಿಗೆಯಿಂದ ಬರೆದಿರುವ ಈ ಪತ್ರದಲ್ಲಿ ಹತ್ರಸ್ ಪ್ರಕರಣದ ಪ್ರಮುಖ ಆರೋಪಿಗಳಾದ ಸಂದೀಪ್, ರಾಮು, ರವಿ ಮತ್ತು ಲವ್ಕುಶ್ ತಾವು ಸಂತ್ರಸ್ತೆಯೊಂದಿಗೆ ಸ್ನೇಹಪರರಾಗಿದ್ದೇವೆಂದು ಒಪ್ಪಿಕೊಂಡಿದ್ದು ಆಗಾಗ್ಗೆ ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಯುವತಿಯ ಕುಟುಂಬದವರಿಗೆ ನಮ್ಮ ಈ ಸ್ನೇಹ ಇಷ್ಟವಿರಲಿಲ್ಲ ಎಂದು ಕೂಡಾ ದೂರಿದ್ದಾರೆ.
ಬಾಲಕಿಗೆ ಹಲ್ಲೆಯಾದ ಸ್ಥಳದಲ್ಲಿ ನಾವು ಯಾರೂ ಕೂಡಾ ಇರಲಿಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದ ದಿನ ಆರೋಪಿ ಬಾಲಕಿಯನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡಿದ್ದು ಆದರೆ ಆಕೆಯ ತಾಯಿ ಮತ್ತು ಸಹೋದರ ಅವರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸ್ಥಳದಿಮದ ವಾಪಾಸ್ ಬಂದಿರುವುದಾಗಿ ಹೇಳಿದ್ದಾರೆ.
ನಮ್ಮನ್ನು ಭೇಟಿಯಾದ ಕಾರಣಕ್ಕೆ ತಾಯಿ ಮತ್ತು ಸಹೋದರ ಆಕೆಗೆ ಥಳಿಸಿದ್ದಾರೆ ಎಂದು ನಮಗೆ ಅಲ್ಲಿಂದ ಬಂದ ಬಳಿಕ ತಿಳಿದುಬಂದಿದೆ. ಯುವತಿಯ ಕುಟುಂಬದವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಮಗೆ ನ್ಯಾಯ ದೊರೆಯಬೇಕು ಎಂದು ಹೇಳಿದ್ದಾರೆ.
ಈ ನಾಲ್ವರು ಆರೋಪಿಗಳು ತಮ್ಮ ಹೆಬ್ಬೆಟ್ಟನ್ನು ಪತ್ರದ ಕೊನೆಯಲ್ಲಿ ಹಾಕಿದ್ದಾರೆ.