ಬೆಂಗಳೂರು, ಅ. 08 (DaijiworldNews/MB) : ''ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ವಿದೇಶದಲ್ಲಿ ಸಂಕಷ್ಟದಲ್ಲಿರುವವರನ್ನು ವಾಪಾಸ್ ಕರೆತರಲು ಸರ್ಕಾರ ರೂಪಿಸಿದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ 20 ಲಕ್ಷ ಭಾರತೀಯರನ್ನು ವಿದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ'' ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ವಂದೇ ಭಾರತ್ ಮಿಷನ್ ಅಡಿ ಈ ಸಂಕಷ್ಟ ಸಂದರ್ಭದಲ್ಲಿ ಜನರನ್ನು ಕರೆತಂದಿರುವುದು ಮಾತ್ರವಲ್ಲದೇ 120 ದೇಶಗಳಿಗೆ ಔಷಧಿಯನ್ನೂ ಸಹ ಪೂರೈಕೆ ಮಾಡಲಾಗಿದೆ'' ಎಂದು ಹೇಳಿದ್ದಾರೆ.
''ಬೇರೆ ದೇಶದಲ್ಲಿ ಸಂಕಷ್ಟದಲ್ಲಿದ್ದವರನ್ನು ಕರೆತರುವಲ್ಲಿ ಏರ್ ಇಂಡಿಯಾ ಪ್ರಮುಖ ಪಾತ್ರ ನಿರ್ವಹಿಸಿದೆ. ವಿದೇಶಾಂಗ ಸಚಿವಾಲಯದ ಪಾತ್ರವೂ ಮಹತ್ತರವಾದದ್ದು. ಮೊದಲು 64 ದೇಶಗಳಿಂದ 12, 708 ಜನರನ್ನು ಕರೆತರಲಾಗಿದ್ದು ಬಳಿಕ ಇದರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಯಶಸ್ವಿ ಅಭಿಯಾನದಲ್ಲಿ 20 ಲಕ್ಷ ಭಾರತೀಯರು ದೇಶಕ್ಕೆ ವಾಪಾಸ್ ಕರೆತರಲಾಗಿದೆ'' ಎಂದು ಹರ್ದೀಪ್ ಸಿಂಗ್ ಹೇಳಿದ್ದಾರೆ.