ಬೆಂಗಳೂರು, ಅ. 08 (DaijiworldNews/MB) : ''ನನ್ನನ್ನು ಕಂಡರೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಭಯ ಅದಕ್ಕೆ ಯಾವಾಗಲೂ ಟಾರ್ಗೆಟ್ ಮಾಡ್ತಾರೆ'' ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ನಗರದ ಜೆಪಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಡಿಕೆ ಪೆದ್ದ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರು. ''ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಿದ್ದರು. ನಾನು ಇವರಂತೆ ಕಮಿಷನ್ ಸರ್ಕಾರ ನಡೆಸಿಲ್ಲ'' ಎಂದು ತಿರುಗೇಟು ನೀಡಿದ್ದಾರೆ.
''ಇನ್ಮುಂದೆ ನಾನು ಅವರ ಬಗ್ಗೆ ಮಾತನಾಡಲ್ಲ ಎಂದು ಸುಮ್ಮನಾಗಿದ್ದೆ. ಆದರೆ ಅವರು ಪದೇ ಪದೇ ನಾನು ಅವರ ಬಗ್ಗೆ ಮಾತನಾಡುವಂತೆ ಮಾಡುತ್ತಾರೆ. ನಾವು ಅವರಂತೆ ಹಿಂದೊಂದು ಮುಂದೆ ಒಂದು ಮಾತನಾಡಲ್ಲ. ಏನೇ ಆದರೂ ಬಡವರ ಬಗ್ಗೆ ಹೃದಯದಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ'' ಎಂದು ಹೇಳಿದ್ದಾರೆ.
''ಸಿದ್ದರಾಮಯ್ಯ ಅವರು, ಈಗ ಜಾತಿ ಗಣತಿ ತೆಗೆದುಕೊಳ್ಳಬೇಕು ಎಂದು ಹೇಳಿಕೊಂಡು ಜಾತಿ ಆಧಾರದಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಏನು ಮಾಡುತ್ತಿದ್ದರು. ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು ಅಲ್ವೇ? ಆಗ ಯಾಕೆ ಇದರ ಬಗ್ಗೆ ಚರ್ಚಿಸಿಲ್ಲ'' ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲೇ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ''ಈಗಾಗಲೇ ಶಿರಾ ಅಭ್ಯರ್ಥಿಯ ಘೋಷಣೆ ಆಗಿದ್ದು ಆರ್ಆರ್ ನಗರ ಅಭ್ಯರ್ಥಿಯ ವಿಚಾರದಲ್ಲಿ ಮೂವರ ಪೈಕಿ ಒಬ್ಬರನ್ನು ಆಯ್ಕೆ ಮಾಡುತ್ತೇವೆ'' ಎಂದು ಹೇಳಿದ್ದಾರೆ.