ಭೋಪಾಲ್, ಅ. 08 (DaijiworldNews/MB) : ನಾವು ಅಧಿಕಾರದಲ್ಲಿರುತ್ತಿದ್ದರೆ 15 ನಿಮಿಷದೊಳಗೆ ಚೀನಾ ಸೈನ್ಯವನ್ನು ಹೊರ ದಬ್ಬುತ್ತಿದ್ದೇವು ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ''ಅಷ್ಟು ಗುಣಮಟ್ಟದ ಡ್ರಗ್ಸ್ ನಿಮಗೆಲ್ಲಿಂದ ದೊರೆಯುತ್ತದೆ?'' ಎಂದು ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನರೋತ್ತಮ್ ಮಿಶ್ರಾ ಅವರು "10 ದಿನಗಳ ಸಾಲ ಮನ್ನಾ, 15 ದಿನಗಳಲ್ಲಿ ಚೀನಾವನ್ನು ಹೊರಹಾಕುವುದು. ಇವೆಲ್ಲವನ್ನು ನಿಮಗೆ ಕಲಿಸಿದ ಶಿಕ್ಷಕರಿಗೆ ಗೌರವವನ್ನು ಸಲ್ಲಿಸಲು ನಾನು ಬಯಸುತ್ತೇನೆ. ಅಂತಹ ಉತ್ತಮ ಗುಣಮಟ್ಟದ ಡ್ರಗ್ ನಿಮಗೆ ಎಲ್ಲಿಂದ ದೊರೆಯುತ್ತದೆ" ಎಂದು ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಮಂಗಳವಾರ ಪಂಜಾಬ್ನಲ್ಲಿ ನಡೆದ ಖೇತಿ ಬಚಾವೊ ಯಾತ್ರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ''ಚೀನಾ ಸೈನ್ಯವು ಈ ಹಿಂದೆ ಭಾರತದ ಭೂಪ್ರದೇಶದೊಳಗೆ ಬರುವ ಧೈರ್ಯ ಮಾಡಿರಲಿಲ್ಲ, ಆದರೆ ಇದೀಗ ಭಾರತದ 1200 ಚದರ ಕಿ.ಮೀ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ. ತನ್ನ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬೇರೆ ದೇಶವೊಂದಕ್ಕೆ ಅನುವು ಮಾಡಿಕೊಟ್ಟಿರುವ ಒಂದೇ ದೇಶ ಅಂದರೆ ಅದು ಭಾರತವಾಗಿದೆ. ಚೀನಾ ಪಡೆಗಳು ನಮ್ಮ ಭೂಪ್ರದೇಶದೊಳಗೆ ಇವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ನರೇಂದ್ರ ಮೋದಿ ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರದ್ದು ಯಾವ ರೀತಿಯ ದೇಶಭಕ್ತಿ?'' ಎಂದು ಪ್ರಶ್ನಿಸಿದ್ದು ''ನಾವು ಅಧಿಕಾರದಲ್ಲಿರುತ್ತಿದ್ದರೆ 15 ನಿಮಿಷದೊಳಗೆ ಚೀನಾ ಸೈನ್ಯವನ್ನು ಹೊರ ದಬ್ಬುತ್ತಿದ್ದೇವು'' ಎಂದು ಹೇಳಿದ್ದರು.