ಕೊಲ್ಕತ್ತಾ, ಅ.08 (DaijiworldNews/PY): ಇಂದು ಪ್ರಜಾಪ್ರಭುತ್ವದ ಕಪ್ಪು ದಿನವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ಇಂದು ಹಾಡಹಗಲೇ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಕಾನೂನುಗಳನ್ನು ಹತ್ಯೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇಂದು ಪಶ್ಚಿಮ ಬಂಗಾಳದಲ್ಲಿ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಫ್ಯಾಸಿಸಂ ಎಂದರೆ ಹೀಗಿದೆ. ನಮ್ಮ ರ್ಯಾಲಿಯ ಸಂದರ್ಭ ಟಿಎಂಸಿ ಗೂಂಡಾಗಳು ಕಂಟ್ರಿ ಬಾಂಬ್ ಗಳನ್ನು ಎಸೆದಿದ್ದಾರೆ. ಶಾಂತಿಯುತ ಮೆರವಣಿಗೆಯ ವಿರುದ್ದ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಿರಂಕುಶ ಅಧಿಕಾರಿಯ ಸಮಯ ಕೊನೆಗೊಳ್ಳುತ್ತಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪ್ರಜಾಪ್ರಭುತ್ವದ ಕಪ್ಪು ದಿನವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ಇಂದು ಹಾಡಹಗಲೇ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಕಾನೂನುಗಳನ್ನು ಹತ್ಯೆ ಮಾಡಿದೆ. ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿದೆ. ಈ ಸಿಂಡಿಕೇಟ್ ಮತ್ತು ಕಟ್ ಮನಿ ಸರ್ಕಾರದಿಂದಾಗಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸಿ ಇಂದು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಪ್ರತಿಭಟನೆಯ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಪೊಲೀಸರಿಗೆ ವಾಗ್ವಾದ ನಡೆದಿದೆ. ಮೆರವಣಿಗೆಯನ್ನು ಪೊಲೀಸರು ತಡೆಯಲು ಯತ್ನಿಸಿದ ಸಂದರ್ಭ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಘರ್ಷಣೆ ಉಂಟಾಗಿದ್ದು, ಬಿಜೆಪಿಯ ಅನೇಕ ಕಾರ್ಯರ್ತರು ಗಾಯಗೊಂಡಿದ್ದಾರೆ.