ಬೆಂಗಳೂರು, ಅ. 09(DaijiworldNews/PY): 2020-21 ಅನ್ನು ಪರೀಕ್ಷಾರಹಿತ ವರ್ಷವೆಂದು ಘೋಷಣೆ ಮಾಡಬೇಕು ಎಂದು ಮಕ್ಕಳ ಹಕ್ಕುಗಳ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಾಂಧರ್ಭಿಕ ಚಿತ್ರ
ಶಾಲಾ ಪುನರಾರಂಭದ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಆಯೋಗ, ಶಾಲಾ ಪುನರಾರಂಭದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಮಕ್ಕಳು ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹಕ್ಕೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದೆ.
ಇನ್ನು 30ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ, ಹಿರಿಯ ಶಾಲೆಗಳನ್ನು ಮೊದಲು ಪ್ರಾರಂಭಿಸಬೇಕು. ಕಿರಿಯ, ಹಿರಿಯ ಶಾಲೆಗಳು ಮೊದಲ 15 ದಿನ ಅರ್ಧ ದಿನ ಕಾರ್ಯನಿರ್ವಹಿಸಬೇಕು ಎಂದು ಆಯೋಗ ತಿಳಿಸಿದೆ.
ಶೀಘ್ರವೇ ಕಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕು. ಅಧಿಕ ಮಕ್ಕಳಿರುವ ಶಾಲೆಯನ್ನು ಪಾಳಿ ಪದ್ದತಿಯ ಪ್ರಕಾರ ಆರಂಭಿಸಬೇಕು. ಶಾಲಾರಂಭದ ಬಳಿಕ ಮಕ್ಕಳಕಲಿಕೆಗೆ ತಕ್ಕಂತೆ ಮಾರ್ಗಸೂಚಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಎಲ್ಲಾ ಮಕ್ಕಳು ಕಡ್ಡಾಯವಾಗಿ ಗುಣಮಟ್ಟದ ಮಾಸ್ಕ್ ನೀಡಬೇಕು. ಮಕ್ಕಳಿಗೆ ರೋಗನಿರೋಧಕ ಮಾತ್ರೆ ಕೊಡಬೇಕು. ಇದೆಲ್ಲದರ ನಡುವೆ ಶಿಕ್ಷಕರು ಕೂಡಾ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದೆ.
ಅಡುಗೆ ಸಿಬ್ಬಂದಿಗಳು ಕೂಡ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಬಗ್ಗೆ ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು ಎಂದೂ ಆಯೋಗ ಶಿಫಾರಸು ಮಾಡಿದೆ.
ಶಾಲಾರಂಭದ ಮುನ್ನ ಪೋಷಕರು ಎಸ್ಡಿಎಂಸಿ ಜೊತೆ ಪೂರ್ವಭಾವಿ ಸಭೆ ನಡೆಸಬೇಕು.ಅಲ್ಲದೇ, ಎಸ್ಡಿಎಂಸಿ ಹಾಗೂ ಗ್ರಾಮ ಪಂಚಾಯತ್ ನ ನೆರವಿನಲ್ಲಿ ಶಾಲೆಗಳನ್ನು ಶುಚಿಗೊಳಿಸಬೇಕು. ಸ್ಯಾನಿಟೈಸ್ ಗೊಳಿಸಬೇಕು ಎಂದಿದೆ.