ಬೆಂಗಳೂರು, ಅ. 09 (DaijiworldNews/SM): ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಮಗೆ ನಮ್ಮ ಮಕ್ಕಳ ಆರೋಗ್ಯ, ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಅವುಗಳನ್ನು ಬಲಿಕೊಟ್ಟು ಯಾರೂ ಯಾವ ಕಾರ್ಯವನ್ನೂ ಪ್ರತಿಷ್ಟೆಗಾಗಿ ಮಾಡಬಾರದು. ಹಾಗೂ ರಾಜ್ಯ ಸರಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಮಾಡುವುದಿಲ್ಲ.
ಶಾಲೆಗಳ ಬಗ್ಗೆ ರಾಜ್ಯದ ಎಲ್ಲಾ ಶಾಸಕರುಗಳ ಅಭಿಪ್ರಾಯಗಳನ್ನು ಸುಮಾರು 9 ದಿವಸಗಳ ಹಿಂದೆ ನಾನು ಕೇಳಿದ್ದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಹಿಡಿದು, ಅನೇಕ ಸಚಿವರು, ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅದೇ ರೀತಿ ಆರೋಗ್ಯ ಸಚಿವ ಶ್ರೀರಾಮುಲು ಸಹ ಈ ಕುರಿತು ಚರ್ಚೆ ನಡೆಸಿ ನನಗೆ ತಮ್ಮ ಅಭಿಪ್ರಾಯ ನೀಡುವುದಾಗಿ ತಿಳಿಸಿದ್ದಾರೆ. ಡಾ. ಸುಧಾಕರ್ ನನಗೆ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.
ಆದರೆ ಅಭಿಪ್ರಾಯಗಳನ್ನು ಕೇಳಿದ ಮಾತ್ರಕ್ಕೆ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಂಡೇ ಬಿಟ್ಟಿದೆ ಎಂಬರ್ಥದಲ್ಲಿ ವಿಪುಲವಾಗಿ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಮತ್ತೆ ಮತ್ತೆ ಇದು ಮರುಕಳಿಸುತ್ತಲೇ ಇದೆ. ನಾನು ಮತ್ತೆ ಮತ್ತೆ ಸ್ಪಷ್ಟೀಕರಣ ಕೊಡುತ್ತಲೇ ಇದ್ದೇನೆ.
ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಈ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಶಾಲೆ ಪ್ರಾರಂಭ ಮಾಡುವ ಯಾವುದೇ ತರಾತುರಿ ನಮ್ಮ ಮುಂದೆ ಇಲ್ಲ. ಶಿಕ್ಷಣ ಇಲಾಖೆಯ ಮುಂದಿನ ತೀರ್ಮಾನವನ್ನು ಮಕ್ಕಳ ಹಿತವನ್ನು ಆದ್ಯತೆಯಲ್ಲಿಟ್ಟುಕೊಂಡು ಎಲ್ಲರೊಡನೆ ಸಮಾಲೋಚನೆಯ ನಂತರ ಕೈಗೊಳ್ಳಲಾಗುತ್ತದೆಯೇ ಹೊರತು ಯಾವುದನ್ನೂ ಧಿಡೀರನೆ ಘೋಷಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.