ಬೆಂಗಳೂರು, ಅ. 10 (DaijiworldNews/HR) : ಕೊರೊನಾ ಸಮಯದಲ್ಲಿಅನುಷ್ಠಾನಕ್ಕೆ ಬಂದಿರುವ ವಿದ್ಯಾಗಮ ಯೋಜನೆಯ ಕಾರಣದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಂಡುಬರುತ್ತಿರುವ ಹಿನ್ನಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸಲು ಆಗ್ರಹಗಳು ಕೇಳಿ ಬರುತ್ತಿದ್ದು,ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾಗಮ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇದೀಗ ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದು, ಎಲ್ಲಿಯೂ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಸಷ್ಟಪಡಿಸಿದ್ದಾರೆ.
ಈ ಕಾರ್ಯಕ್ರಮದಿಂದ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸ್ನೇಹ ಸಂಬಂಧ ಗಟ್ಟಿಗೊಳ್ಳುವ ಮೂಲಕ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಅಷ್ಟೇ ಅಲ್ಲದೇ, ಅವರ ಮಾನಸಿಕ, ದೈಹಿಕ ಸ್ಥಿತಿಗತಿಗಳನ್ನು ಸುಸ್ಥಿತಿಯಲ್ಲಿಡಲು ಅದು ಪೂರಕವಾಗಿದೆ. ಇಡೀ ದೇಶದಲ್ಲಿಯೇ ವಿದ್ಯಾಗಮ ಮಾದರಿಯ ಉಪಕ್ರಮವಾಗಿ ಗುರುತಿಸಿಕೊಂಡಿದೆ ಎಂದರು.
ಇನ್ನು ಈ ಯೋಜನೆಯ ಉಪಯುಕ್ತತೆ ಮತ್ತು ಅಲ್ಲಿ ಅಳವಡಿಸಿಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಯಾರಲ್ಲಿಯೂ ಗೊಂದಲ ಅಥವಾ ಸಂಶಯ ಬೇಡ. ಆದರೆ ಶಿಕ್ಷಕರ ಕಾರಣಕ್ಕೆ ಮಕ್ಕಳು ಕೊರೊನಾ ಸೋಂಕಿತರಾಗಿದ್ದಾರೆಯೇ, ಮಕ್ಕಳಿಂದ ಶಿಕ್ಷಕರಿಗೆ ಅದು ಹರಡಿದೆಯೇ ಎಂಬ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಸಂಗ್ರಹಣೆಗೆ ಇಂದಿನಿಂದಲೇ ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.