ಬೆಂಗಳೂರು, ಅ. 10 (DaijiworldNews/MB) : ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತ ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿ ಅವರ 5 ವರ್ಷದ ಪುತ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಬೆದರಿಕೆಗಳು ಬಂದಿದ್ದು ಈ ಬೆದರಿಕೆಗಳಿಗೆ ಹಲವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು ಇದು ತೀರ ಕೀಳು ಮಟ್ಟದ ವರ್ತನೆ ಎಂದು ಹೇಳಿದ್ದಾರೆ.
ಈ ಹಿಂದೆ ಆಟಗಾರರ ಪತ್ನಿಯರಿಗೆ ಬೆದರಿಕೆ ಹಾಕುವಂತಹ ಟ್ರೋಲ್ಗಳು ಮಾಡಲಾಗಿದ್ದು ಈಗ 5 ವರ್ಷದ ಬಾಲಕಿಗೆ ಅತ್ಯಾಚಾರ ಬೆದರಿಕೆ ಹಾಕಿರುವುದು ತೀರಾ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ನಗ್ಮಾ ಅವರು, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಧೋನಿಯವರ 5 ವರ್ಷದ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗುತ್ತದೆ ಎಂದರೆ ನಮ್ಮ ರಾಷ್ಟ್ರ ಎತ್ತ ಸಾಗುತ್ತದೆ. ಇದು ತೀರಾ ಅಸಹ್ಯಕರ. ಪ್ರಧಾನಿ ಮೋದಿಯವರೇ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ ? ಎಂದು ಪ್ರಶ್ನಿಸಿದ್ದಾರೆ.
ಇದು ಅಸಹ್ಯ! ನಮ್ಮ ದೇಶಕ್ಕೆ ಏನಾಗುತ್ತಿದೆ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಇದು ಅತ್ಯಂತ ಅಸಹ್ಯಕರ ಉದಾಹರಣೆಯಾಗಿದೆ. ಭಾರತ ಸರ್ಕಾರ ಇನ್ನೂ ಈ ಬಗ್ಗೆ ಗಮನ ಹರಿಸದಿದ್ದರೆ, ಮಹಿಳೆಯರ ವಿರುದ್ದ ಇಂತಹ ಅನಾರೋಗ್ಯ, ವಿಕೃತ ಮನಸ್ಥಿತಿಗೆ ಉತ್ತೇಜನ ನೀಡಿದಂತೆ ಎಂದು ಹೇಳಿದ್ದಾರೆ.