ಬೆಂಗಳೂರು, ಅ. 10 (DaijiworldNews/MB) : ಕೊರೊನಾ ಸಮಯದಲ್ಲಿಅನುಷ್ಠಾನಕ್ಕೆ ಬಂದಿರುವ ವಿದ್ಯಾಗಮ ಯೋಜನೆಯಿಂದಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದೆ ಎಂಬ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಹಲವರು ಆಗ್ರಹಿಸಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿರುವ ಅವರು, ''ರಾಜ್ಯದಲ್ಲಿ ಜಾರಿ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ'' ಎಂದು ಹೇಳಿದ್ದಾರೆ.
ಈ ಹಿಂದೆ ಈ ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವರು, ''ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೀಗ ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದು, ಎಲ್ಲಿಯೂ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ'' ಎಂದು ತಿಳಿಸಿದ್ದರು.