ಶ್ರೀನಗರ, ಅ. 10(DaijiworldNews/PY): ಕಾಶ್ಮೀರ ಕಣಿವೆಗೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ನುಗ್ಗಿಸುವ ಪಾಕ್ನ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ಶನಿವಾರ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಪಾಕಿಸ್ತಾನವು ಪಿಒಕೆಯಿಂದ ಕುಪ್ವಾರಾ ಜಿಲ್ಲೆಯ ಕೆರನ್ ಸೆಕ್ಟರ್ನಲ್ಲಿ ಕಾಶ್ಮೀರ ಕಣಿವೆಗೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ನುಗ್ಗಿಸುವ ಪ್ರಯತ್ನ ಮಾಡಿದ್ದು, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಮೂರು ಮಂದಿ ಭಯೋತ್ಪಾದಕರು ಕೇರನ್ ಸೆಕ್ಟರ್ನ ಕಿಶೆನ್ಗಂಗಾ ನದಿಗೆ ಅಡ್ಡಲಾಗಿ ಹಗ್ಗಕ್ಕೆ ಟ್ಯೂಬ್ ಅನ್ನು ಕಟ್ಟಿ ಇದರ ಮುಖೇನ ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿರುವುದನ್ನು ಗಡಿ ನಿಯಂತ್ರಣ ರೇಖೆ ಕಾಯುತ್ತಿದ್ದ ಪಡೆಗಳು ಗಮನಿಸಿದ್ದು, ಈ ವೇಳೆ ಯೋಧರು ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭ ಎಕೆ 74 ರೈಫಲ್ಸ್, ಎಂಟು ಮ್ಯಾಗಜೀನ್ಗಳು ಸೇರಿದಂದತೆ 240 ಸುತ್ತು ಮದ್ದುಗುಂಡುಗಳನ್ನು ಪತ್ತೆಯಾಗಿದ್ದು ಅವುಗಳನ್ನು ಸೈನಿಕರು ವಶಪಡಿಸಿಕೊಂಡಿರುವುದಾಗಿ ಸೇನಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
ಇದಾದ ನಂತರ ಸೇನೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದ್ದು, ಉಗ್ರರ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.