ಕೊಚ್ಚಿ, ಅ. 10(DaijiworldNews/PY): ಮಾಜಿ ರಣಜಿ ಕ್ರಿಕೆಟಿಗ ಎಂ.ಸುರೇಶ್ ಕುಮಾರ್ (47) ಅವರು ತಮ್ಮ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರೇಶ್ ಕುಮಾರ್ ಅವರು ಕೇರಳದ ಆಲಪ್ಪುಳ ಬಳಿಯ ತಮ್ಮ ನಿವಾಸದಲ್ಲಿ ಬೆಡ್ ರೂಂನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುರೇಶ್ ಕುಮಾರ್ ಅವರ ಶವವನ್ನು ಮೊದಲು ಅವರ ಮಗ ನೋಡಿದ್ದಾರೆ. ಈ ಬಗ್ಗೆ ನಮಗೆ ಸುಮಾರು 7:15ಕ್ಕೆ ಮಾಹಿತಿ ನೀಡಿದ್ದಾರೆ. ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟಿಗ ಸುರೇಶ್ ಕುಮಾರ್ ಅವರು ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಿದ್ದರು. ಸುರೇಶ್ ಕುಮಾರ್ ಅವರು ಆಲಪ್ಪುಳ ಮೂಲದವರಾಗಿದ್ದು, ಎಡ ಗೈ ಸ್ಪಿನ್ನರ್ ಎಂದೇ ಹೆಸರುವಾಸಿಯಾಗಿದ್ದರು. ಇವರು 1991-92 ರಿಂದ 2005-06ರವರೆಗೆ 72 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 1,657 ರನ್ ಗಳಿಸಿ 196 ವಿಕೆಟ್ ಪಡೆದಿದ್ದರು. 1995-96ರ ರಾಜಸ್ಥಾನ ವಿರುದ್ಧದ ರಣಜಿ ಟ್ರೋಫಿ ಕಪ್ನಲ್ಲಿ ಕೇರಳ ಪರ ಆಡಿದ ಇವರು ಹ್ಯಾಟ್ರಿಕ್ ವಿಕೆಟ್ ಗಳಿಸಿ ಸಾಧನೆ ಗೈದಿದ್ದರು. ಅಲ್ಲದೇ, ಇಂಡಿಯಾ ಅಂಡರ್ -19 ಟೆಸ್ಟ್ ತಂಡದಲ್ಲಿಯೂ ಕೂಡಾ ಇವರು ಸ್ಥಾನ ಪಡೆದಿದ್ದರು.